

ಪಂಚನಹಳ್ಳಿ: ಜನರ ಅಭಿರುಚಿಗೆ ತಕ್ಕಂತೆ ಗಣೇಶಮೂರ್ತಿ ತಯಾರಕರು ವಿಭಿನ್ನ ವಿಗ್ರಹಗಳನ್ನು ಸಿದ್ಧಪಡಿಸಿದ್ದು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ.
ಕಡೂರಿನಲ್ಲಿ 32 ವರ್ಷಗಳಿಂದ ಗಣಪತಿ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿರುವ ದೊಡ್ಡಪಟ್ಟಣಗೆರೆ ಗ್ರಾಮದ ನಂಜುಂಡಪ್ಪ ಮತ್ತವರ ಇಡೀ ಕುಟುಂಬ ವಿವಿಧ ರೀತಿಯ ಗಣಪತಿ ಮೂರ್ತಿಗಳನ್ನು ತಯಾರಿಸಿದ್ದು ಕೋರ್ಟ್ ಮುಂಭಾಗದ ಪುರಸಭೆ ಕಟ್ಟಡದಲ್ಲಿ ಮಾರಾಟಕ್ಕಿವೆ.
ಮಹರಾಜ ಗಣಪತಿ, ಆನೆ ಮುಖದ ಗಣಪತಿ, ಆನೆ ಮೇಲೆ ಕೂತಿರುವ ಗಣಪತಿ, ಪಾಂಡುರಂಗ ಗಣಪತಿ, ರಾಮನ ಭಂಗಿಯಲ್ಲಿ ನಿಂತ ಗಣಪತಿ ಮತ್ತು ಈ ಬಾರಿ ವಿಶೇಷವಾಗಿ ನಿಂತಿರುವ ಗಣಪತಿ ಜನರ ಕಣ್ಮನ ಸೆಳೆಯುತ್ತಿವೆ. ಅರ್ಧ ಅಡಿಯಿಂದ ಆರೂವರೆ ಅಡಿ ಎತ್ತರದವರೆಗೆ ಗಣೇಶನ ಮೂರ್ತಿಗಳು ಲಭ್ಯವಿವೆ. ಆಯಾ ಗಾತ್ರಕ್ಕೆ ತಕ್ಕಂತೆ ಬೆಲೆ ನಿಗದಿಯಾಗಿದೆ.
ಗಣಪತಿ ಮೂರ್ತಿಗಾಗಿ ಬೇಕಾದ ಮಣ್ಣನ್ನು ಚಿಕ್ಕಮಗಳೂರಿನ ಮತ್ತಾವರ ಕೆರೆ, ಮಲ್ಲೇಶ್ವರ ಕೆರೆಯಿಂದ ತರುತ್ತಾರೆ. ಮಣ್ಣನ್ನು ಕಲಸಿ ಹದ ಮಾಡಿ ಅದರೊಳಗೆ ತಮ್ಮ ಕಲ್ಪನೆಯನ್ನು ಬೆರೆಸಿ ಮಣ್ಣಿಗೆ ಮೂರ್ತರೂಪ ನೀಡುತ್ತಾರೆ. ನಂತರ ಆ ಮೂರ್ತಿಗಳಿಗೆ ಪರಿಸರಸ್ನೇಹಿ ಬಣ್ಣವನ್ನು ಹಚ್ಚಿ ಪ್ಲಾಸ್ಟಿಕ್ ರಹಿತ ಆಭರಣಗಳನ್ನು ಹಾಕಿ ಸಿಂಗರಿಸುತ್ತಾರೆ.
ಇವರು ತಯಾರಿಸಿದ ಮೂರ್ತಿಗಳಿಗೆ ಬೇಡಿಕೆಯಿದ್ದು ಬಹಳಷ್ಟು ಗ್ರಾಹಕರು ಮುಂಗಡವನ್ನೂ ನೀಡಿದ್ದಾರೆ. ನಮ್ಮ ಕಾಯಕಕ್ಕೆ ಹಲವರು ಪ್ರೋತ್ಸಾಹ ನೀಡುತ್ತಿದ್ದಾರೆ ಎನ್ನುತ್ತಾರೆ ನಂಜುಂಡಪ್ಪ ಅವರ ಮಗ ಮಧುಕುಮಾರ್.