

ಕಡೂರು: ದೇಹದ ಸದೃಢತೆಗೆ ಮಾನಸಿಕ ಆರೋಗ್ಯ ಮುಖ್ಯ. ಸಾತ್ವಿಕ ಆಹಾರ ಸೇವಿಸುವ ಮೂಲಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಂಪನ್ಮೂಲ ವ್ಯಕ್ತಿ ಡಾ.ಶ್ರೀಕಾಂತ್ ತಿಳಿಸಿದರು.
ತಾಲೂಕಿನ ಕೆ.ಬಿದರೆ ಗ್ರಾಮದಲ್ಲಿ ಜ್ಞಾನ ವಿಕಾಸ ಕೇಂದ್ರದಿಂದ ಸೋಮವಾರ ಏರ್ಪಡಿಸಿದ್ದ ಸೃಜನಶೀಲ ಕಾರ್ಯಕ್ರಮದ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿ, ನಾವು ಸೇವಿಸುವ ಆಹಾರದಲ್ಲಿ ಕ್ರಮಬದ್ಧತೆ ಅಳವಡಿಸಿಕೊಳ್ಳಬೇಕಿದೆ. ಸಾಮಾನ್ಯವಾಗಿ ತರಕಾರಿಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಸಮತೋಲಿತ ಆಹಾರವನ್ನು ಸೇವಿಸುವುದರಿಂದ ಸದೃಢ ದೇಹ ಹೊಂದಲು ಸಹಕಾರಿ ಎಂದರು. ತಾಲೂಕು ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಬಿ.ಎಸ್. ಭಾಗ್ಯಾ ಮಾತನಾಡಿ, ಒತ್ತಡದ ಬದುಕಿಗೆ ಆರೋಗ್ಯದ ಕಾಳಜಿ ಅತಿಮುಖ್ಯ. ಗ್ರಾಮೀಣ ಭಾಗದಲ್ಲಿ ಜ್ಞಾನ ವಿಕಾಸ ಕೇಂದ್ರದಡಿ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಶಿಬಿರದಲ್ಲಿ ಭಾಗವಹಿಸಿದ ಮಹಿಳಾ ಸದಸ್ಯರಿಗೆ ಆರೋಗ್ಯ ತಪಾಸಣೆ ಹಾಗೂ ಹಸಿ ತರಕಾರಿಗಳನ್ನು ವಿತರಿಸಲಾಯಿತು. ರೆಹಮತ್, ಒಕ್ಕೂಟದ ಕಾರ್ಯದರ್ಶಿ ವಸಂತಕುಮಾರಿ, ಸೇವಾ ಪ್ರತಿನಿಧಿ ಅನಿತಾ ಮತ್ತಿತರರಿದ್ದರು.