

ಕೋಲಾರ: ರಾಜ್ಯದಲ್ಲಿ ಇತ್ತೀಚೆಗೆ ಮಾನವ ಹಕ್ಕುಗಳ ಹೆಸರಿನಲ್ಲಿ ಕೆಲ ಸಂ&ಸಂಸ್ಥೆಗಳವರು ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ, ಹಕ್ಕುಗಳನ್ನು ಉಲ್ಲಂನೆ ಮಾಡುವುದು ಆಯೋಗದ ಗಮನಕ್ಕೆ ಬಂದರೆ ಸ್ವಯಂ ದೂರು ದಾಖಲಿಸಲಾಗುವುದು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ಎಚ್ಚರಿಕೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ದೂರನ್ನು ನೀಡಲು ಬಂದವರನ್ನು ಅಧಿಕಾರಿಗಳು ಸೌಜನ್ಯದಿಂದ ಮಾತನಾಡಿಸಬೇಕು. ದೂರುದಾರರಿಗೆ ಅರ್ಥವಾಗುವ ರೀತಿ ಹೇಳಿದರೆ ಅವರ ಅರ್ಧದಷ್ಟು ಸಮಸ್ಯೆ ಬಗೆಹರೆಯುತ್ತವೆ. ದೂರುಗಳು ಬಂದರೆ ಸಂಬಂಧಪಟ್ಟ ಇಲಾಖೆಯ ವರದಿಯನ್ನು ನಾವು ಕೇಳುತ್ತೇವೆ, ಇಲಾಖೆಯ ಅಧಿಕಾರಿಗಳು ಸಂಪೂರ್ಣ ವರದಿ ನೀಡಿದರೆ, ಅದನ್ನು ಪರಿಗಣಿಸಿ ದೂರುದಾರರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.
ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗ ಸದಸ್ಯರಾದ ಎಸ್.ಕೆ.ವೆಂಟಿಗೋಡಿ ಮಾತನಾಡಿ, ಆಯೋಗದಿಂದ ಈಗಾಗಲೇ 18 ಜಿಲ್ಲೆಗಳಿಗೆ ಭೇಟಿ ನೀಡಲಾಗಿದೆ. ಜಿಲ್ಲೆಯ ಸಾರ್ವಜನಿಕ ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ಮಾಡಿ ಆಯೋಗಕ್ಕೆ ಬಂದಿರುವ ದೂರುಗಳನ್ನು ಇತ್ಯರ್ಥ ಪಡಿಸಿದ್ದೇವೆ. ಕಂದಾಯ ಮತ್ತು ಪೊಲೀಸ್ ಇಲಾಖೆಗೆ ಸಂಬಂಧಿಸಿದ ಅತಿ ಹೆಚ್ಚು ಪ್ರಕರಣಗಳು ಆಯೋಗಕ್ಕೆ ಬರುತ್ತಿವೆ. ಸಾರ್ವಜನಿಕರಿಗೆ ಹತ್ತಿರದಲ್ಲಿ ಸಿಗುವುದರಿಂದ ಇಲಾಖೆಗಳ ಅಧಿಕಾರಿಗಳು ಬೇಗ ಸ್ಪಂದಿಸಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ಆಯೋಗದ ಅಧ್ಯಕ್ಷರು ಜಿಲ್ಲೆಗೆ ಆಗಾಗ ಭೇಟಿ ನೀಡಿದಲ್ಲಿ, ನಿತ್ಯದ ಜಾಡ್ಯ ಕಳೆದು ಅಧಿಕಾರಿಗಳು ಇನ್ನಷ್ಟು ಚುರುಕುಗೊಂಡು ಕೆಲಸಗಳನ್ನು ಪಕ್ವವಾಗಿ ನಿರ್ವಹಿಸುತ್ತಾರೆ. ಜಿಲ್ಲಾಡಳಿತಕ್ಕೂ ಆತ್ಮಾವಲೋಕನ ಮಾಡಿಕೊಳ್ಳುವ ಅವಕಾಶ ಸಿಗುತ್ತದೆ ಎಂದರು.
ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಆಪ್ತ ಕಾರ್ಯದರ್ಶಿ ಅರುಣ್ ಪೂಜಾರ್, ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಪ್ರವಿಣ್ ಪಿ.ಬಾಗೇವಾಡಿ, ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು, ಉಪವಿಭಾಗಾಧಿಕಾರಿ ಡಾ.ಮೈತ್ರಿ, ತಹಸೀಲ್ದಾರ್ ಡಾ.ನಯನಾ, ಎಸ್ಪಿ ರವಿಶಂಕರ್ ಹಾಜರಿದ್ದರು.