ಮಾಡಿದ್ದ ಸಾಲ ತೀರಿಸಲು ಪ್ರೇಯಸಿಯನ್ನೇ ಕೊಂದು ಒಡವೆಗಳನ್ನು ಮಾರಿದ ಮೆಕಾನಿಕ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕಳೆದ ಮೂರು ದಿನಗಳ ಹಿಂದೆ ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಂಗಳೂರು ರಸ್ತೆ ಚೆಲುವನಹಳ್ಳಿಯಲ್ಲಿ ನಡೆದಿದ್ದ ಮಹಿಳೆಯ ಹತ್ಯೆ ಪ್ರಕರಣವನ್ನು ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲೂಕಿನ ನರಸಾಪುರ ಸಮೀಪದ ಬೆಳ್ಳೂರಿನ ಮಹಿಳೆ ಮಾಲಾ(೪೦) ಎಂಬಾಕೆಯ ಶವ ಬುಧವಾರ ಚುಂಚದೇನಹಳ್ಳಿ ಬಳಿ ರಸ್ತೆ ಬದಿಯಲ್ಲಿ ಪತ್ತೆಯಾಗಿತ್ತು.

ಶವದ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ ಹಿನ್ನೆಲೆಯಲ್ಲಿ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಮೃತಳ ಜೊತೆ ಇತ್ತೀಚೆಗೆ ತೀರಾ ಸುಲುಗೆಯಿಂದ ಇದ್ದ ಮಾಲೂರಿನ ಕೆ.ಎಸ್.ಆರ್.ಟಿ.ಸಿ. ಡಿಪೋ ಮೆಕ್ಯಾನಿಕ್ ಈರಪ್ಪನ ಮೇಲೆ ಅನುಮಾನ ಬಂದಿತ್ತು.

ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಮಾಲಾಳನ್ನು ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಕೋಲಾರ ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್ ತಿಳಿಸಿದ್ದಾರೆ.

ಮಾಲಾಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಕೆಲ ವರ್ಷದಿಂದ ಆಕೆ ಗಂಡನಿAದ ದೂರವಾಗಿದ್ದರು. ನರಸಾಪುರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆ ಈರಪ್ಪನ ದೂರದ ಸಂಬAಧಿ ಸಹ ಆಗಿದ್ದರು.

ಕಳೆದ ಜನವರಿ ತಿಂಗಳಿನಲ್ಲಿ ನಡೆದ ಈರಪ್ಪನ ಮೊಮ್ಮಗನ ನಾಮಕರಣ ಸಂದರ್ಭದಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಅದರ ನಂತರ ಇಬ್ಬರ ನಡುವೆ ಸಲುಗೆ ಬೆಳೆದಿತ್ತು.

ಮಾಲೂರು ನಗರದ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಈರಪ್ಪ ಊರೆಲ್ಲಾ ಸಾಲ ಮಾಡಿಕೊಂಡಿದ್ದನು ಎನ್ನಲಾಗಿದೆ.

ಮಾಲಾ ಬಳಿ ಇದ್ದ ಬಂಗಾರದ ಆಭರಣಗಳನ್ನು ಮಾರಿದರೆ ತನ್ನ ಸಾಲ ತೀರಿಸಬಹುದು ಎಂಬ ಸಂಚು ಮಾಡಿದ ಈರಪ್ಪ ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದಲೇ ಮಾಲಾಳನ್ನು ಟೂರ್‌ಗೆ ಹೋಗೋಣ, ನಿನ್ನ ಬಳಿ ಇರುವ ಒಡವೆಗಳನ್ನು ಹಾಕಿಕೊಂಡು ಬಾ' ಎಂದು ಪುಸಲಾಯಿಸಿದ್ದ.

ಕೆಲಸಕ್ಕೆ ರಜೆ ಹಾಕಿದ ಮಾಲಾ ತನ್ನ ಮನೆಯಲ್ಲಿ ಬಾಯಿಕೊಂಡ ಗಂಗಮ್ಮನ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಬುಧವಾರ ಬೆಳಗಿನ ಜಾವ ೬ ಗಂಟೆಗೆಲ್ಲ ಮನೆಯಿಂದ ಹೊರಹೋಗಿದ್ದಳು.

ಆಕೆಯನ್ನು ಚುಂಚದೇನಹಳ್ಳಿಯ ರಸ್ತೆ ಬದಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದ ಈರಪ್ಪ ತನ್ನ ಜೊತೆ ತಂದಿದ್ದ ಸುತ್ತಿಗೆಯಿಂದ ಆಕೆಯ ತಲೆಗೆ ಹೊಡೆದು ಹತ್ಯೆಗೈದು ಆಕೆಯ ಮೃ ಮೇಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಬಿ.ನಿಖಿಲ್ ವಿವರಿಸಿದ್ದಾರೆ.

ಸಾಲದ ಒತ್ತಡದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿರುವ ಈರಪ್ಪನನ್ನು ಕೋಲಾರ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಚಿತ್ರ ೧೧ ಕೆ.ಎಲ್.ಆರ್. ೦೫ : ಮೃತ ಮಾಲ ರವರ ಭಾವಚಿತ್ರ

ಚಿತ್ರ ೧೧ ಕೆ.ಎಲ್.ಆರ್. ೦೫ಎ : ಆರೋಪಿ ಈರಪ್ಪನ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net