

ಕಡೂರು: ಕುಟುಂಬ ಮತ್ತು ಸಮಾಜದ ಸ್ವಾಸ್ಥೃ ಕಾಪಾಡುವಲ್ಲಿ ಮಹಿಳೆಯರ ಪಾತ್ರ ಹಿರಿದು ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಹೇಳಿದರು.
ತಾಲೂಕಿನ ಮಾಚಗೊಂಡನಹಳ್ಳಿ ಗ್ರಾಮದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ತಾಲೂಕು ಕದಳಿ ಮಹಿಳಾ ವೇದಿಕೆ ಆಶ್ರಯದಲ್ಲಿ ನಡೆದ ಶರಣರ ಬೆಳದಿಂಗಳು ಕಾರ್ಯಕ್ರಮದಲ್ಲಿ ಮಾತನಾಡಿದರು. ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಲ್ಲದು ಎಂಬ ಮಾತಿನಂತೆ ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ತನ್ನದೇ ಆದ ಸಾಧನೆ ಮಾಡುತ್ತ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕಂಕಣಬದ್ಧಳಾಗಿದ್ದಾಳೆ ಎಂದರು.
ಇತಿಹಾಸದ ಪುಟಗಳನ್ನು ಗಮನಿಸುತ್ತ ಹೋದರೆ ತೇನ್‌ಸಿಂಗ್, ಸ್ವಾಮಿ ವಿವೇಕಾನಂದ, ಶಿವಾಜಿ, ಎಡಿಸನ್ ಮುಂತಾದ ಸಾಧಕರ ಇತಿಹಾಸದಲ್ಲಿ ಅವರ ಬಾಲ್ಯದ ದಿನಗಳಲ್ಲಿ ಅವರ ತಾಯಂದಿರ ಪ್ರೇರಣೆ, ಪ್ರೋತ್ಸಾಹ ಮತ್ತು ಮೌಲ್ಯಯುತ ವಿಚಾರಗಳು ಜೀವನಕ್ಕೆ ಹಾಕಿಕೊಟ್ಟ ಭದ್ರ ಬುನಾದಿಯಾಗಿದೆ ಎಂದರು.
ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಜಾತಾ ಜಡೆಮಲ್ಲಪ್ಪ ಮಾತನಾಡಿ, ಮಹಿಳೆ ಅಡುಗೆ ಮನೆಗೆ ಸೀಮಿತವಾಗದೆ ಕುಟುಂಬ ಮತ್ತು ಸಮಾಜವನ್ನು ಸರಿದಾರಿಗೆ ತರುವಲ್ಲಿ ಶ್ರಮಿಸುತ್ತಿದ್ದಾಳೆ ಎಂದು ಹೇಳಿದರು.
ಯಳನಡು ಮಹಾಸಂಸ್ಥಾನ ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ವಿದ್ಯಾಧರೆ, ಕದಳಿ ಮಹಿಳಾ ವೇದಿಕೆ ಉಪಾಧ್ಯಕ್ಷೆ ಶೈಲಾ ಶಿವಣ್ಣ, ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಕೆ.ಬಿ.ಬಸವರಾಜಪ್ಪ, ಹೋಬಳಿ ಅಧ್ಯಕ್ಷ ಜಿ.ಟಿ.ರಾಜಶೇಖರ್, ಪದಾಧಿಕಾರಿಗಳಾದ ಭುವನೇಶ್ವರಿ, ಕೆ.ಬಿ.ಸುನೀತಾ, ಸರೋಜಾ, ಜಿಲ್ಲಾ ಜಾಗತಿಕ ಲಿಂಗಾಯತ ವೇದಿಕೆ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಮತ್ತಿತರರಿದ್ದರು.