ಮಹಿಳೆಯರಿಗೆ ಆರ್ಥಿಕ ಶಕ್ತಿ: ಸಿಎಂ ಘೋಷಣೆ; ಯೋಜನೆಗೆ ಅ. 2ರಂದು ಚಾಲನೆ

CM Woman
ರಾಜ್ಯ ಮಟ್ಟದ ಸ್ವಯಂ ಸೇವಾ ಸಂಸ್ಥೆಗಳ ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಕೇಂದ್ರ ಸಚಿವ ಶೋಭಾ ಕರಂದ್ಲಾಜೆ, ಸಚಿವ ಮುರುಗೇಶ್ ನಿರಾಣಿ, ಒಕ್ಕೂಟದ ಕಾರ್ಯದರ್ಶಿ ಡಾ. ಎಸ್. ಜಿ. ಸುಶೀಲಮ್ಮ, ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ವೂಡೇ. ಪಿ. ಕೃಷ್ಣ ಇತರರು ಇದ್ದರು.
Published on

ಬೆಂಗಳೂರು: ಸಮಾನತೆ ದುಡಿಮೆಯ ಕ್ರಾಂತಿ ಮಾಡುತ್ತಿರುವ ಸ್ತ್ರೀಶಕ್ತಿ ಸಂಘ ಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಗೆ ಅಕ್ಟೋಬರ್ 2ರಂದು ಚಾಲನೆ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ನಗರದ ಗಾಂಧಿ ಭವನದಲ್ಲಿ ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಗಾಂಧಿ ಸ್ಮಾರಕ ನಿಧಿ ಹಾಗೂ ಸುಮಂಗಲಿ ಸೇವಾ ಆಶ್ರಮ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಸ್ವಯಂ ಸೇವಾ ಸಂಸ್ಥೆಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸ್ತ್ರೀಶಕ್ತಿ ಸಂಘಗಳು ರಾಜ್ಯದ ಆರ್ಥಿಕತೆಗೆ ಕೊಡುಗೆ ನೀಡಲು ಅನುಕೂಲವಾಗುವಂತೆ ಆಯವ್ಯಯದಲ್ಲಿ ಮೊದಲ ಬಾರಿಗೆ 1.5 ಲಕ್ಷ ಆರ್ಥಿಕ ನೆರವು ಒದಗಿಸಲಾಗಿದೆ. ಜತೆಗೆ ಆಂಕರ್ ಬ್ಯಾಂಕ್ ಜೋಡಣೆ, ಯಂತ್ರೋಪಕರಣ, ಪ್ರಾಜೆಕ್ಟ್​ಗಳು, ಉತ್ಪನ್ನಗಳಿಗೆ ಮಾರುಕಟ್ಟೆಗಳಲ್ಲಿ ಹಾಗೂ ಅಮೆಜಾನ್​ನಂತಹ ಆನ್​ಲೈನ್ ವೇದಿಕೆಗಳಲ್ಲಿ ಮಾರಾಟದ ವ್ಯವಸ್ಥೆ ಕಲ್ಪಿಸಲಾಗುವುದು. ಈ ಸಂಬಂಧ ಪ್ರಾರಂಭಿಸಿರುವ ಪ್ರಾಯೋಗಿಕವಾಗಿ ಎಲಿವೇಟ್ ಕಾರ್ಯಕ್ರಮದಲ್ಲಿ ಒಂದು ಸ್ತ್ರೀಶಕ್ತಿ ಸಂಘ ತಿಂಗಳಿಗೆ ಸುಮಾರು 50 ಲಕ್ಷ ರೂ. ವಹಿವಾಟು ಮಾಡುತ್ತಿದೆ. ಇದು ಸಂಘಟಿತ ಶ್ರಮದ ಶಕ್ತಿ ಎಂದು ಹೇಳಿದರು.

ಮಹಿಳೆಯರ ದುಡಿಮೆಗೆ ಬೆಲೆ ಕೊಡಬೇಕು: ಸೇವಾ ಸಂಸ್ಥೆಗಳು ಸಮಾನತೆಯ ಕ್ರಾಂತಿ ತರುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ರಾಜ್ಯವನ್ನು ಸುಭೀಕ್ಷವಾಗಿಸಲು ಶ್ರಮಿಸುತ್ತಿವೆ. ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶದ ಸ್ತ್ರೀಶಕ್ತಿಯ ಸಬಲೀಕರಣ ಆಗಬೇಕು. ಸ್ಥಳೀಯ ಸಂಘಸಂಸ್ಥೆಗಳ ಉತ್ಪನ್ನಗಳು ವಿದೇಶದಲ್ಲಿ ಮಾರಾಟ ವಾಗಬೇಕು. ಆಗ ನಮ್ಮ ಆರ್ಥಿಕತೆಗೆ ಶಕ್ತಿ ಬರುತ್ತದೆ. ಈ ದೇಶದಲ್ಲಿ ಮಹಿಳೆಯರ ದುಡಿಮೆಗೆ ಬೆಲೆ ಕೊಡಬೇಕು. ಅವರಲ್ಲಿ ಆರ್ಥಿಕ ಸ್ವಾತಂತ್ರ್ಯ ಬಂದರೆ ಉಳಿದಂತೆ ಶೈಕ್ಷಣಿಕ, ಸಾಮಾಜಿಕ ಸೇರಿ ಎಲ್ಲ ವಲಯಗಳಲ್ಲೂ ಸ್ತ್ರೀಯರು ಸಬಲರಾಗುತ್ತಾರೆ ಎಂದರು.

ವಿದೇಶಿ ಬಂಡವಾಳ ಹೂಡಿಕೆಯಲ್ಲಿ ರಾಜ್ಯವು ಪ್ರಸಕ್ತ ವರ್ಷದ ನಾಲ್ಕನೇ ತ್ರೖೆಮಾಸಿಕದಲ್ಲಿ ಮೊದಲ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರು ಆಸಕ್ತಿ ವಹಿಸಿದರೆ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ. ಉದ್ಯಮಿಯಾಗುವ ಮೂಲಕ ಉದ್ಯೋಗ ಕಲ್ಪಿಸುವ ಬಗ್ಗೆ ಗಮನಹರಿಸಬೇಕು. ಇದಕ್ಕಾಗಿ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿ ಕೊಳ್ಳಬೇಕು. ಸ್ತ್ರೀಶಕ್ತಿ ಸಂಘಗಳಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ವಿಶೇಷ ಕಾರ್ಯಾಗಾರ ಆಯೋಜಿಸಲು ಸಹ ಸಿದ್ಧ. | ಮುರುಗೇಶ್ ನಿರಾಣಿ ಕೈಗಾರಿಕಾ ಸಚಿವ

ಶ್ರಮಿಕ ವರ್ಗದ ಕೊಡುಗೆ: ದೇಶದ ತಲಾವಾರು ಆದಾಯದಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ. ಇದಕ್ಕೆ ರಾಜ್ಯದ ಜನರ ಕೊಡುಗೆ ಶೇ.30 ಮಾತ್ರ. ಉಳಿದ ಶೇ. 70 ಜನರು ಜೀವನೋಪಾಯಕ್ಕಾಗಿ ದುಡಿಯುತ್ತಿದ್ದಾರೆ. ಇವರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ರಾಜ್ಯದ ಆರ್ಥಿಕತೆಗೆ ಶ್ರಮಿಕ ವರ್ಗದ ಜನರ ಕೊಡುಗೆ ದೊರೆಯುತ್ತದೆ. ಹಾಗೆಯೇ ಕೇಂದ್ರ ಸರ್ಕಾರ ಸಂಘಗಳ ಮೂಲಕ ರೈತ ಉತ್ಪನ್ನಗಳ ಮೌಲ್ಯವರ್ಧನೆ, ಹೆಚ್ಚಿನ ದರದಲ್ಲಿ ಮಾರಾಟಕ್ಕೆ ಯೋಜನೆ ಆರಂಭಿಸಿದ್ದು, ಮೀನುಗಾರಿಕೆ, ಕುಶಲಕರ್ವಿುಗಳಿಗೂ ಯೋಜನೆ ವಿಸ್ತರಿಸಲಾಗುವುದು ಎಂದು ಹೇಳಿದರು.

ಕೃಷಿ ರಫ್ತಿನಲ್ಲಿ 9ನೇ ಸ್ಥಾನ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ದೇಶದ ಪ್ರಗತಿಯಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಮಹತ್ವದ ಪಾತ್ರ ವಹಿಸುತ್ತಿದ್ದು, ಮಹಿಳೆಯರು ಈ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು. ಕೋವಿಡ್ ನಂತರ ಬಹಳಷ್ಟು ಮಂದಿ ಕೃಷಿಯತ್ತ ಮುಖ ಮಾಡಿದ್ದಾರೆ. ಹೀಗಾಗಿ, ಕೃಷಿ ಉತ್ಪಾದನೆಯಲ್ಲಿ ದೇಶವು ಗುರಿ ಮೀರಿ ಸಾಧನೆ ಮಾಡಿದೆ. ಕೃಷಿ ಉತ್ಪನ್ನಗಳ ರಫ್ತು ಪ್ರಮಾಣದಲ್ಲಿ ಭಾರತ ಈಗ 9ನೇ ಸ್ಥಾನ ಪಡೆದಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಕಾರ್ಯದರ್ಶಿ ಡಾ. ಎಸ್.ಜಿ. ಸುಶೀಲಮ್ಮ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net