ಮಹಿಳೆಯರ ಜತೆ ಅಸಭ್ಯ ವರ್ತನೆ ನಾಗರಿಕರ ಲಕ್ಷಣವಲ್ಲ

RemasterDirector_1a5c03258
RemasterDirector_1a5c03258
Published on

ಪಿರಿಯಾಪಟ್ಟಣ: ಸಮಾಜ ಉತ್ತಮ ಸ್ಥಿತಿಗೆ ಬರಲು ಹೆಣ್ಣಿನ ಪಾತ್ರ ಮಹತ್ವದ್ದಾಗಿದ್ದು. ಹಾಗೆಯೇ ಹೆಣ್ಣಿಗೆ ಕಾಣದ ಕೈಗಳ ಸಹಕಾರ ಕೂಡ ಸಾಕಷ್ಟಿರುತ್ತದೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶ್ವೇತಾ ತಿಳಿಸಿದರು.

ಪಟ್ಟಣದ ವಕೀಲರ ಭವನದಲ್ಲಿ ವಕೀಲರ ಸಂಘ ಮತ್ತು ನ್ಯಾಯಾಲಯದ ಸಿಬ್ಬಂದಿ ಬುಧವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಿಳೆಯರನ್ನು ಅಸಭ್ಯ ಹಾಗೂ ಅಡ್ಡ ಹೆಸರುಗಳಿಂದ ಕರೆದು ಅವಮಾನಿಸುವುದು, ಹೀಯಾಳಿಸುವುದು ನಾಗರಿಕ ಸಮಾಜದ ಲಕ್ಷಣವಲ್ಲ. ಮಹಿಳೆಯರು ಬೆಳಗ್ಗೆ ರಂಗೋಲಿ ಬಿಡುವುದರಿಂದ ಹಿಡಿದು ದಿನವಿಡೀ ಕುಟುಂಬದಲ್ಲಿ ನಿರ್ವಹಣೆ ಮಾಡುವ ಎಲ್ಲ ಕೆಲಸಗಳನ್ನು ಸಂಭ್ರಮದಿಂದಲ್ಲಿ ಮಾಡುತ್ತಾರೆ ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಆರ್.ಯೋಗೀಶ್ ಮಾತನಾಡಿ, ಮಹಿಳೆಯರು ತಾಯಿ, ಪತ್ನಿ, ಸೊಸೆ, ಸಹೋದರಿ ಸೇರಿದಂತೆ ಎಲ್ಲ ಪಾತ್ರಗಳನ್ನು ನಿಭಾಯಿಸುವ ಮೂಲಕ ಸಮಾಜದಲ್ಲಿ ಪ್ರಾಧಾನ್ಯತೆ ಹೊಂದಿದ್ದಾರೆ. ನಾವು ಮನರಂಜನೆಯ ಉದ್ದೇಶದಿಂದ ನೋಡುವ ಧಾರಾವಾಹಿಗಳಿಂದ ನಮ್ಮ ಸಮಾಜಕ್ಕೆ ಉತ್ತಮ ಸಂದೇಶ ದೊರಕುತ್ತಿಲ್ಲ. ಅಕ್ರಮ, ಅನ್ಯಾಯ, ಹಿಂಸೆಗಳನ್ನು ವೈಭಣವೀಕರಿಸುವ ಮೂಲಕ ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಕೆಲಸದಲ್ಲಿ ತೊಡಗಿವೆ. ಭ್ರಷ್ಟಾಚಾರ ಮುಕ್ತ, ಶೋಷಣೆ ಮುಕ್ತ ಸಮಾಜ ನಿರ್ಮಾಣದಿಂದ ಮಾತ್ರ ನಾವು ಬದಲಾವಣೆ ಕಾಣಲು ಸಾಧ್ಯ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ರಾಜು ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ತೋರಿದರೆ ಉತ್ತಮ ರಾಷ್ಟ್ರ ನಿರ್ಮಾಣದ ಅಡಿಪಾಯ ಹಾಕಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ವಕೀಲರ ಸಂಘದ ಅಧ್ಯಕ್ಷ ಧನಪಾಲ್, ಕಾರ್ಯದರ್ಶಿ ಶಂಕರ್, ಶಿರಸ್ತೇದಾರ್, ನಾಗೇಶ್ ಮಾತನಾಡಿದರು. ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ವಕೀಲರ ಸಂಘದ ಉಪಾಧ್ಯಕ್ಷ ಚಂದ್ರೇಗೌಡ, ಖಜಾಂಚಿ ಹರೀಶ್, ಶಿರಸ್ತೇದಾರ್ ಲೋಕೇಶ್, ಎಪಿಪಿ ಶ್ರೀನಾಥ್, ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net