ಮಹಿಳೆ ಮೇಲೆ ಕಾಡುಕೋಣ ದಾಳಿ

kona
ಕಾಡುಕೋಣ ದಾಳಿಯಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯನ್ನು ಡಿಆರ್‌ಎ್ಒ ರಘು ಮಣಿಪಾಲದ ಆಸ್ಪತ್ರೆಯಲ್ಲಿ ಭೇಟಿಯಾಗಿ ಘಟನೆಯ ಮಾಹಿತಿ ಪಡೆದರು.
Published on

ಜಯಪುರ: ಮಲೆನಾಡಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ದಾಳಿ ಹೆಚ್ಚಾಗಿದ್ದು ಬುಧವಾರ ಹೇರೂರು ಗ್ರಾಮದ ಅಲ್ನೂರ್ ಎಸ್ಟೇಟಿನಲ್ಲಿ ಹುಲ್ಲು ಕೊಯ್ಯುತ್ತಿದ್ದ ಸುಮಿತ್ರಾ (55) ಕಾರ್ಮಿಕ ಮಹಿಳೆ ಮೇಲೆ ಕಾಡುಕೋಣ ದಾಳಿ ನಡೆಸಿದೆ.

ತೋಟದಲ್ಲಿ ಹುಲ್ಲು ಕೊಯ್ಯಲು ಹೋದ ಮಹಿಳೆ ಮೇಲೆ ಕಾಡುಕೋಣ ಏಕಾಏಕಿ ದಾಳಿ ನಡೆಸಿದ್ದು ಮಹಿಳೆಯ ಬಲಭಾಗದ ತೊಡೆಯ ಮೂಳೆ ಮುರಿದಿದೆ. ಗಾಯಾಳುವನ್ನು ಜಯಪುರದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕೊಪ್ಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಮಣಿಪಾಲ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಸ್ಥಳಕ್ಕೆ ಕೊಪ್ಪ ಆರ್‌ಎ್ಒ ರಂಗನಾಥ್, ಡಿಆರ್‌ಎ್ಒ ರಘು ಭೇಟಿ ನೀಡಿದರು. ಮೇಗುಂದಾ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಹತ್ತಕ್ಕೂ ಹೆಚ್ಚು ರೈತ ಹಾಗೂ ಕೂಲಿ ಕಾರ್ಮಿಕರ ಮೇಲೆ ಕಾಡುಕೋಣಗಳು ದಾಳಿ ನಡೆಸಿದ್ದು ಇಬ್ಬರು ಸಾವನ್ನಪ್ಪಿದ್ದರೆ ಉಳಿದವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜನವಸತಿ ಹಾಗೂ ಕೃಷಿ ಚಟುವಟಿಕೆ ನಡೆಸುವ ಪ್ರದೇಶಕ್ಕೆ ಕಾಡುಕೋಣಗಳು ಆಗಾಗ ದಾಳಿ ಮಾಡುತ್ತಿರುವುದರಿಂದ ಅಪಾರ ಪ್ರಮಾಣದ ಬೆಳೆಯೂ ನಷ್ಟವಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಮತ್ತು ಜಿಲ್ಲಾಡಳಿತ ಗಮನಹರಿಸಿ ಕಾಡುಕೋಣಗಳ ಸ್ಥಳಾಂತರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಕಾಡುಕೋಣದಿಂದ ದಾಳಿಗೊಳಗಾದ ಮಹಿಳೆಗೆ ತುರ್ತು ಚಿಕಿತ್ಸೆಗೆ ಒಂದು ಲಕ್ಷ ರೂ. ಈಗಾಗಲೇ ಶಾಸಕರ ಮೂಲಕ ವಿತರಿಸಲಾಗಿದೆ. ಆಕೆಯ ಪೂರ್ಣ ಚಿಕಿತ್ಸಾ ವೆಚ್ಚವನ್ನು ಅರಣ್ಯ ಇಲಾಖೆ ಭರಿಸಲಿದೆ. ಹೋಬಳಿಯಾದ್ಯಂತ ಕಾಡಂಚಿನಲ್ಲಿ ರೈತರ ಕೃಷಿ ಭೂಮಿ ಇರುವುದರಿಂದ ಕಾಡುಪ್ರಾಣಿಗಳ ದಾಳಿ ಹೆಚ್ಚಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಕಾಡು ಕೋಣಗಳನ್ನು ಅರಣ್ಯದೆಡೆಗೆ ಅಟ್ಟುವ ಕೆಲಸವನ್ನು ಅರಣ್ಯ ಇಲಾಖೆ ಮಾಡಲಿದೆ ಎಂದು ಕೊಪ್ಪ ವಲಯ ಅರಣ್ಯಾಧಿಕಾರಿ ರಂಗನಾಥ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net