ಮಹಿಳಾ ಮೀಸಲಾತಿಗೆ ಬಿಜೆಪಿ ಮಹಿಳಾ ಮೋರ್ಚಾ ಸಂಭ್ರಮಾಚರಣೆ

mahila morcha
ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಅಜಾದ್ ಪಾರ್ಕ್ ವೃತ್ತದಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಸಂಭ್ರಮಾಚರಣೆ ನಡೆಸಲಾಯಿತು. ವೀಣಾ ರತ್ನಾಕರ ಶೆಟ್ಟಿ, ಕವಿತಾ ಶೇಖರ್, ಎಚ್.ಸಿ.ಕಲ್ಮರುಡಪ್ಪ, ಜಸಿಂತಾ ಅನಿಲ್ ಕುಮಾರ್, ಲೀಲಾ ಇತರರಿದ್ದರು.
Published on

ಚಿಕ್ಕಮಗಳೂರು: ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಗೆ ಲೋಕಸಭೆ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ನಗರದ ಬಿಜೆಪಿ ಕಚೇರಿಯಿಂದ ಆಜಾದ್ ಪಾರ್ಕ್ ಸರ್ಕಲ್‌ವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತೆಯರು ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಕೂಗಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ರತ್ನಾಕರ ಶೆಟ್ಟಿ ಮಾತನಾಡಿ, 27 ವರ್ಷದ ಹೋರಾಟಕ್ಕೆ ಇಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಯ ದೊರಕಿಸಿಕೊಟ್ಟಿದೆ. ಶೇ.33 ರಷ್ಟು ಮೀಸಲಾತಿ ಕಲ್ಪಿಸಿರುವುದು ಇಡೀ ದೇಶದ ಮಹಿಳೆಯರು ಹೆಮ್ಮೆಪಡುವ ವಿಷಯ. ಕೇಂದ್ರ ಸರ್ಕಾರದ ಸಂಪುಟದಲ್ಲೂ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ನೀಡಲಾಗಿದ್ದು, ಅವರು ಯಶಸ್ವಿಯಾಗಿ ಜವಾಬ್ದಾರಿ ನಿಭಾಯಿಸಿಕೊಂಡು ಹೋಗುತ್ತಿರುವುದನ್ನು ಗಮನಿಸಿರುವ ಮೋದಿ ಅವರು ಮಹಿಳೆಯರಿಗೆ ಹೆಚ್ಚು ಮೀಸಲಾತಿ ದೊರೆತಲ್ಲಿ ದೇಶವನ್ನೂ ಉತ್ತಮವಾಗಿ ಮುನ್ನಡೆಸುತ್ತಾರೆ ಎನ್ನುವುದನ್ನು ಮನಗಂಡು ಮೀಸಲಾತಿ ಮಸೂದೆ ಮಂಡಿಸಿ ಅನುಮೋದನೆ ಪಡೆದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರೆ ಕವಿತಾ ಶೇಖರ್ ಮಾತನಾಡಿ, ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ. ಮಹಿಳೆ ಮನೆಯನ್ನು ಸಮೃದ್ಧಿಯಾಗಿ ನಿರ್ವಹಿಸಿದ ರೀತಿ ದೇಶವನ್ನೂ ಮುನ್ನಡೆಸ ಬಲ್ಲಳು ಎನ್ನುವ ಅಚಲ ನಂಬಿಕೆ ಮೋದಿ ಅವರದ್ದಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಮಾತನಾಡಿ, ನಾರಿಶಕ್ತಿ ಹೆಸರಲ್ಲಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿರುವುದು ಇಡೀ ದೇಶದ ಮಹಿಳೆಯರು ಸಂಭ್ರಮಸುವ ವಿಚಾರವಾಗಿದೆ. ಹಲವು ಸರ್ಕಾರಗಳು ದೇಶವನ್ನು ಆಳಿವೆ. ಇಂದಿರಾಗಾಂಧಿ ಅವರೂ ಈ ರೀತಿಯಾದ ಮಹತ್ವದ ನಿರ್ಧಾರ ತೆಗೆದುಕೊಂಡಿರಲಿಲ್ಲ. ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ಸಂಭ್ರಮಾಚರಣೆಯಲ್ಲಿ ಗ್ರಾಮಾಂತರ ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಿಂತಾ ಅನಿಲ್ ಕುಮಾರ್, ಕಾರ್ಯದರ್ಶಿ ಲೀಲಾ, ಜಿಲ್ಲಾ ಉಪಾಧ್ಯಕ್ಷೆ ಪುಷ್ಪಾ ಮೋಹನ್, ನಗರಸಭೆ ಸದಸ್ಯೆ ರೂಪಾ, ಪ್ರಮುಖರಾದ ಸುಜಾತಾ, ಅನು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net