ಮಹಿಳಾ ಅಧ್ಯಯನಕ್ಕೆ ‘ತಿರುವು’ ಹೊಸ ಆಯಾಮ

07_HSN_02
Published on


ಹಾಸನ: ಮನುಷ್ಯ ಸಂಬಂಧ ಮತ್ತು ಮಾನವೀಯ ಬದುಕನ್ನು ಹುಡುಕುತ್ತಿರುವ ಸಾಮಾಜಿಕ ಕಥಾ ಸಂಕಲನವೇ ‘ತಿರುವು’ ಎಂದು ವಿಮರ್ಶಕ ಡಾ.ರವಿಕುಮಾರ್ ನೀಹಾ ಅಭಿಪ್ರಾಯಪಟ್ಟರು.


ನಗರದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ಸಾಹಿತಿ ಸಿ.ಸುವರ್ಣಾ ಕೆ.ಟಿ.ಪ್ರಸಾದ್ ಅವರ ಕಥಾ ಸಂಕಲನ ‘ತಿರುವು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.


ಮಹಿಳಾ ಬದುಕಿನ ಕಥನಗಳು ಇಲ್ಲಿ ಕಥೆಗಳಾಗಿ ರೂಪುಗೊಂಡಿವೆ. ಭಾರತೀಯ ಸಮಾಜದ ಮಹಿಳಾ ಅಧ್ಯಯನಕ್ಕೆ ತಿರುವಿನಲ್ಲಿರುವ ಕಥೆಗಳು ಹೊಸ ಆಯಾಮಗಳನ್ನು ಕಟ್ಟಿಕೊಡುತ್ತವೆ ಎಂದು ಹೇಳಿದರು.


ಈ ಕಥಾಸಂಕಲನದಲ್ಲಿ ಕೌಟುಂಬಿಕ ಸಂಬಂಧಗಳು ಹಾಗೂ ಮನುಷ್ಯನ ಬದುಕಿನ ಕಟು ವಾಸ್ತವತೆಯನ್ನು ಎಳೆಎಳೆಯಾಗಿ ತೆರೆದಿಟ್ಟಿದ್ದು, ಓದುಗರನ್ನು ಚಿಂತನೆಗೆ ದೂಡುತ್ತದೆ. ಮಹಿಳೆಯ ಸುಸ್ಥಿತಿಯ ಬದುಕು ಹಾಗೂ ಸಂಕಷ್ಟದ ಬದುಕುಗಳೆರಡನ್ನೂ ಒಂದು ಬಿಂದುವಾಗಿ ಸೇರಿಸುತ್ತದೆ. ಭಾವ ಪ್ರಪಂಚವನ್ನು ವಿಸ್ತರಿಸುತ್ತದೆ ಎಂದು ವಿಶ್ಲೇಷಿಸಿದರು.


ಈ ಕಥಾಸಂಕಲನದಲ್ಲಿ ನನ್ನನ್ನು ತುಂಬಾ ಕಾಡಿದ್ದು ‘ಆ ದಿನಗಳು’ ಕಥೆ. ಮಹಿಳೆ ಶೀರ್ಷಿಕೆಯ ಕಥೆ ವಿಭಿನ್ನವಾದ ಆಯಾಮ ಹೊಂದಿದೆ. ಪರಿವರ್ತನೆ, ತಿರುವು ಮತ್ತು ಮುಕ್ತಾಯ ಕಥೆಗಳು ಸಾಮಾಜಿಕ ಕಾಳಜಿ ಮೇಲೆ ಬೆಳಕು ಚೆಲ್ಲಿವೆ. ಕಥೆಗಳು ಅನೇಕ ತಿರುವುಗಳನ್ನು ಪಡೆದು ಸುಖಾಂತ್ಯಗೊಳ್ಳುತ್ತವೆ. ಸಂಬಂಧಗಳ ಸಂಕೀರ್ಣತೆಗಳೇ ಈ ಕಥೆಗಳಲ್ಲಿನ ಮುಖ್ಯಾಂಶಗಳಾಗಿವೆ ಎಂದು ಹೇಳಿದರು.


ಸಾಹಿತಿ ಡಾ.ಪಿ.ಭಾರತಿದೇವಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ತಿರುವು ಕಥಾ ಸಂಕಲನದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣ, ಕುಟುಂಬದೊಳಗಿನ ಅವರ ಸ್ಥಿತಿಗತಿ, ನಿತ್ಯದ ಬದುಕಿನಲ್ಲಿರುವ ಸಂಕೀರ್ಣತೆಯನ್ನು ಕಾಣಬಹುದಾಗಿದೆ. ಮಹಿಳಾ ಕಥೆಗಾರರಾದ ಶಾಂತಿ ಅಪ್ಪಣ್ಣ, ಕವಿತಾ ರೈ, ಅನುಪಮಾ ಪ್ರಸಾದ್ ಹಾಗೂ ಸಿ. ಸುವರ್ಣಾ ಅವರ ಕಥೆಗಳು ಪುರುಷ ಕಥೆಗಾರರಾದ ಗುರುಪ್ರಸಾದ್ ಕಂಟಲಗೆರೆ, ವಿಕಾಸ್ ಮೌರ್ಯ, ಗೊರವರ ಕಥೆಗಳಿಗಿಂತಲೂ ವಿಭಿನ್ನವಾಗಿವೆ ಎಂದು ಹೇಳಿದರು.


ಚಿಂತಕ ಎಚ್.ಆರ್.ಸ್ವಾಮಿ, ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶ್‌ಗೌಡ, ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ.ಶಿವಪ್ರಸಾದ್, ಶಿಕ್ಷಣ ಇಲಾಖೆಯ ಅಧಿಕಾರಿ ಸಿ. ಸುಜಾತಾ, ಮೋಹನ್‌ಕುಮಾರಿ, ಮಮತಾ ಅರಸೀಕೆರೆ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net