ಮಲೆನಾಡಿನಲ್ಲಿ ಕಳೆಕಟ್ಟಿದ ವರಮಹಾಲಕ್ಷ್ಮೀ ಸಂಭ್ರಮ

25ckm1- varamha lakshmi
Published on

ಚಿಕ್ಕಮಗಳೂರು ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲಿ ಒಂದಾದ ವರಮಹಾಲಕ್ಷ್ಮೀ ಹಬ್ಬವನ್ನು ನಗರ ಸೇರಿದಂತೆ ಜಿಲ್ಲಾದ್ಯಂತ ಶುಕ್ರವಾರ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ಮಹಿಳೆಯರು ಲಕ್ಷ್ಮೀದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು.
ಮನೆಗಳನ್ನು ಬಾಳೆ ಕಂದು, ಮಾವಿನ ಸೊಪ್ಪಿನ ತಳಿರು ತೋರಣಗಳಿಂದ ಸಿಂಗರಿಸಿ ಮನೆ ಮುಂಭಾಗ ಆಕರ್ಷಕ ರಂಗೋಲಿ ಬಿಡಿಸಲಾಗಿತ್ತು. ವರಮಹಾಲಕ್ಷ್ಮೀ ಹಬ್ಬಕ್ಕಾಗಿ ದೇವರ ಕೋಣೆಯಲ್ಲಿ ನಿರ್ಮಿಸಿದ ಮಂಟಪಗಳಲ್ಲಿ ಲಕ್ಷ್ಮೀ ದೇವಿಯನ್ನು ಪ್ರತಿಸ್ಥಾಪಿಸಿ ಪುಷ್ಪಗಳಿಂದ ಅಲಂಕರಿಸಿ, ಭಕ್ತಿಯಿಂದ ಪೂಜಿಸಿದರು.
ಹೊಳಿಗೆ ಚಕ್ಕುಲಿ, ಕೋಡುಬಳೆ, ಕರ್ಜಿಕಾಯಿ, ಪಾಯಸ ಇನ್ನಿತರ ಬಗೆ ಬಗೆಯ ಭಕ್ಷೃಗಳನ್ನು ತಯಾರಿಸಿ ಮಹಾಲಕ್ಷ್ಮೀಗೆ ನೈವೇದ್ಯ ಮಾಡಿದರು. ನಗ, ನಾಣ್ಯ, ಆಭರಣಗಳನ್ನು ಲಕ್ಷ್ಮೀಯ ಮುಂದೆ ಇಟ್ಟು ಪೂಜೆ ಮಾಡಿದರು. ಐಶ್ವರ್ಯ, ನೆಮ್ಮದಿ ಆರೋಗ್ಯ ಕರುಣಿಸುವಂತೆ ವರಮಹಾ ಲಕ್ಷ್ಮೀಯಲ್ಲಿ ಪ್ರಾರ್ಥಿಸಿದರು.
ಮುತ್ತೈದೆಯರನ್ನು ಮನೆಗೆ ಕರೆದು ಅರಿಸಿನ, ಕುಂಕುಮ ಕೊಟ್ಟರು. ಕುಟುಂಬದವರು, ನೆಂಟರಿಷ್ಟರು ಮತ್ತು ಸ್ನೇಹಿತರನ್ನು ಮನೆಗೆ ಆಹ್ವಾನಿಸಿ ಹಬ್ಬದ ವಿಶೇಷ ಅಡುಗೆ ಬಡಿಸಿದರು. ಶ್ರಾವಣ ಮಾಸದಲ್ಲಿ ಮಹಾಲಕ್ಷ್ಮೀ ದೇವಿಯನ್ನು ಪೂಜಿಸಿದರೆ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ಅಶ್ವರ್ಯ ಲಭಿಸುತ್ತದೆ ಎಂಬ ನಂಬಿಕೆ ಜನರಲ್ಲಿ ಬೇರೂರಿದೆ. ಯಾವುದೇ ಒಳ್ಳೆಯ ಕೆಲಸಗಳನ್ನು ಈ ದಿನ ಆರಂಭಿಸಿದರೆ ಶುಭವಾಗುತ್ತದೆ ಎಂಬ ವಿಶ್ವಾಸ ಜನರಲ್ಲಿದೆ.
ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ನಗರದ ಲಕ್ಷ್ಮೀದೇವಿ ದೇವಾಲಯ, ಸಾಯಿ ಬಾಬ, ಗಣೇಶ ದೇವಾಲಯ, ಆಂಜನೇಯ ಸ್ವಾಮಿ ದೇವಾಲಯ, ಈಶ್ವರ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆುಯಿತು. ಸಾರ್ವಜನಿಕರು ಮುಂಜಾನೆಯಿಂದಲೇ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net