ಮನುಷ್ಯನು ಪರಿಪೂರ್ಣತೆಗೆ ಶಿಕ್ಷಣವೇ ಮೂಲ

553bd734-a8a1-40d8-88a5-0fd2285c006f
Published on

ಬಾಗಲಕೋಟೆ: ಮನುಷ್ಯನು ಪರಿಪೂರ್ಣತೆಗೆ ಶಿಕ್ಷಣವೇ ಮೂಲ ಬುನಾಧಿಯಾಗಿದ್ದು, ಆಧುನಿಕ ಯುಗದಲ್ಲಿ ಪರಿಣಾಮಕಾರಿ ಶಿಕ್ಷಣಕ್ಕೆ ಮೂಲ ಮೌಲ್ಯಗಳನ್ನು ಅನುಸರಿಸಿಬೇಕು, ಆ ನಿಟ್ಟಿನಲ್ಲಿ ಸಂಘದಿಂದ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದು ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಚರಂತಿಮಠ ಅವರು ಹೇಳಿದರು.

ಅವರು ನಗರದ ವಿದ್ಯಾಗಿರಿಯಲ್ಲಿರುವ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜ್ ನೂತನ ಸಭಾಭವನದಲ್ಲಿ ಭಾನುವಾರ ನಡೆದ ಬಸವೇಶ್ವರ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲಾ ಸಮೂಹದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಶೈಕ್ಷಣಿಕ ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಅವರು ಬದುಕು ಕಟ್ಟಿಕೋಳ್ಳುವಂತಹ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಪರಿಣಾಮ ಇಂದು ನಗರದ ಬಸವೇಶ್ವರ ಅಂತರಾಷ್ಟ್ರೀಯ ಪಬ್ಲಿಕ್ ಶಾಲಾ ಸಮೂಹದ ಇತರ ಶಾಖೆಗಳಾದ ಲೋಕಾಪುರ, ಮುಧೋಳ, ರಾಮದುರ್ಗ, ಮತ್ತು ಬಿಡದಿ ಶಾಲೆಗಳು ನವದೆಹಲಿಯ ಕೇಂದ್ರೀಯ ಶಿಕ್ಷಣ ಮಂಡಳಿಯಿಂದ ಮಾನ್ಯತೆ ಪಡೆದಿದ್ದು ಶ್ಲಾಘನೀಯ, ಸಂಘದ ಶೈಕ್ಷಣಿಕ ಧ್ಯೇಯೋದ್ದೇಶಗಳನ್ನು ಈಡೇರಿಸುವಲ್ಲಿ ಮುಂಚೂಣಿಯಲ್ಲಿರುವ ಬಿಪ್ಸ್ ಶಾಲಾ ಸಮೂಹದ ಸಿಬ್ಬಂದಿ ವರ್ಗ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಾಚಾರ್ಯರಾದ ಸಿ.ಬಿ.ಸುರೇಶ್ ಹೆಗ್ಡೆ ಸೇರಿದಂತೆ ಸಾಧನೆಗೆ ಕಾರಣೀಕರ್ತರಾದ ಪ್ರತಿ ಶಾಲೆಯ ಪ್ರಾಚಾರ್ಯರು ಮತ್ತು ಶಿಕ್ಷಕ ಮತ್ತು ಶಿಕ್ಷಕೇತರ ವೃಂದಕ್ಕೆ ಅಭಿನಂದನೆಗಳನ್ನು ತಿಳಿಸಿದರು.

ವಿಸ್ತಾರ ಜಿಂದಗಿ ಸಂಸ್ಥಾಪಕರೂ ಜೀವನ ಕೌಶಲ್ಯ ತರಬೇತುದಾರರಾದ ಮಹೇಶ್ ಮಾಶಾಳ ಅವರು ಮಾತನಾಡಿ ಶಿಕ್ಷಕರು ಮಕ್ಕಳಿಗೆ ಗೆಲುವನ್ನು ಸಂಭ್ರಮಿಸುವುದರ ಜೊತೆಗೆ ಸೋಲನ್ನು ಒಪ್ಪಿಕೊಳ್ಳುವ ಗುಣವನ್ನು ಸಹ ಕಲಿಸಬೇಕು. ಮಕ್ಕಳಿಗೆ ಮಾನವೀಯ ಮೌಲ್ಯಗಳು ಜೀವನದಲ್ಲಿ ಮುಖ್ಯ ಎಂಬುದನ್ನು ಹೇಳಿಕೊಡಬೇಕು ಎಂದರು.

ಕಾರ್ಯಕ್ರಮದಲ್ಲಿ ಖ್ಯಾತ ತರಬೇತುದಾರರಾದ ದಿನೇಶ್ ನಾಯರ್ ಮತ್ತು ಲೋಕೇಶ್ ಅವರು, ಶಿಕ್ಷಕರು ತರಗತಿ ಕೋಣೆಯಲ್ಲಿ ಮಕ್ಕಳನ್ನು ಯಾವ ರೀತಿ ತೊಡಗಿಸಬೇಕು, ತರಗತಿ ಕೋಣೆಯ ನಿರ್ವಹಿಸುವಿಕೆ, ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮಗಳ ವ್ಯತ್ಯಾಸ ಮತ್ತು ಅವುಗಳ ತಿಳುವಳಿಕೆಯ ಜೊತೆಗೆ ಪಾಠ ಯೋಜನೆ, ತಾಂತ್ರಿಕ ಬೋಧನೆ, ಸಂವಹನದ ಬಗೆಗೆ ಹಲವಾರು ಮಾಹಿತಿಗಳನ್ನು ನೆರೆದ ಎಲ್ಲ ಶಿಕ್ಷಕರಿಗೂ ತಿಳಿಸಿದರು.

ಸಂಘದ ಶಾಲಾ ಆಡಳಿತ ಮಂಡಳಿಯ ಸಮಿತಿಯ ಕಾರ್ಯಾಧ್ಯಕ್ಷರಾದ ಮಹಾಂತೇಶ ಶೆಟ್ಟರ್ ಹಾಗೂ ಪ್ರಾಚಾರ್ಯರಾದ ಸಿ ಬಿ ಸುರೇಶ್ ಹೆಗಡೆ ಅವರು ಮಾತನಾಡಿದರು. ಅಭಿನಂದನಾ ಸಮಾರಂಭದಲ್ಲಿ ನೂತನ ಸಿಬಿಎಸ್ಸಿ ಶಾಲೆಗಳು ಮಾನ್ಯತೆ ಪಡೆಯುವಲ್ಲಿ ಶ್ರಮಿಸಿದ ಸಿ ಎಸ್ ಮಾಲಿ ಪಾಟೀಲ್ ಹಾಗೂ ಬಸವರಾಜ್ ಕಲಾದಗಿ ಅವರನ್ನು ಸನ್ಮಾನಿಸಲಾಯಿತು.

ಬಿ.ವಿ.ವಿ.ಸಂಘದ ಗೌರವ ಕಾರ್ಯದರ್ಶಿ ಮಹೇಶ್ ಅಥಣಿ ಅವರು ಹಾಗೂ ಬಸವೇಶ್ವರ ಅಂತರಾಷ್ಟ್ರೀಯ ಪಬ್ಲಿಕ್ ಶಾಲೆಯ ಉಪ ಪ್ರಾಚಾರ್ಯ ಮಂಗಳ ಗೌರಿ ಹೆಗ್ಡೆ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿಯರಾದ ಶ್ರೀಮತಿ ಅಂಜುಮ್ ಸಿದ್ದಿಕ್ ಹಾಗೂ ಶ್ರೀಮತಿ ಶಿಲ್ಪಾ ಕುಲಕರ್ಣಿ ಅವರು ನಿರೂಪಿಸಿದರು. ರಾಮದುರ್ಗ ಬಸವೇಶ್ವರ ಅಂತರಾಷ್ಟ್ರೀಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಎಲ್ ಎಂ ಅರಿಬೆಂಚಿ ಅವರು ವಂದಿಸಿದರು. ಸುಮಾರು ೪೫೦ಕ್ಕಿಂತ ಹೆಚ್ಚಿನ ಬಿಪ್ಸ್ ಶಾಲಾ ಸಿಬ್ಬಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net