ಮನಮೋಹನ್ ಸಿಂಗ್ ಅಂತಿಮ ದರ್ಶನ ಪಡೆದ ಸಚಿವ ಕೆ.ಎಚ್.ಮುನಿಯಪ್ಪರಿಂದ ಗೌರವ ಅರ್ಪಣೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಅಪಾರ ಕೊಡುಗೆ ನೀಡಿರುವ ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್ ನಿಧನದಿಂದ ಅಪಾರ ನಷ್ಟವಾಗಿದೆ. ಓರ್ವ ಮೇಧಾವಿಯನ್ನು ದೇಶ ಕಳೆದುಕೊಂಡಿದೆ ಎಂದು ರಾಜ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆಹೆಚ್. ಮುನಿಯಪ್ಪ ಕಂಬನಿ ಮಿಡಿದಿದ್ದಾರೆ.

ದೆಹಲಿಯ ಮನಮೋಹನ್‌ಸಿಂಗ್ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದ ನಂತರ ಮಾಧ್ಯಮಗಳೊಂದಿಗೆ ದೂರವಾಣಿಯ ಮೂಲಕ ಮಾತನಾಡಿ, ರಿಸರ್ವ್ ಬ್ಯಾಂಕ್ ಗೌರ‍್ನರ್ ಆಗಿ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಯುಜಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮನಮೋಹನ್ ಸಿಂಗ್ ದೇಶದ ವಿತ್ತ ಮಂತ್ರಿಯಾಗಿ ಸಂಕಷ್ಟದ ಸಂದರ್ಭದಲ್ಲಿ ದೇಶವನ್ನು ಆರ್ಥಿಕವಾಗಿ ಅಭಿವೃದ್ದಿ ಪಥದತ್ತ ಸಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದರು.

ಎರಡು ಅವಧಿ ಈ ದೇಶದ ಪ್ರಧಾನಿಯಾಗಿದ್ದ ಅವರ ಸಂಪುಟದಲ್ಲಿ ನನಗೂ ಅವಕಾಶ ನೀಡಿದ್ದು, ಅವರೊಂದಿಗೆ ಕೆಲಸ ಮಾಡಿದ್ದು ನನ್ನ ಅದೃಷ್ಟ ಎಂದು ತಿಳಿಸಿ, ರೈತರ ಪರ ಅವರ ಕಾಳಜಿ ಮೆಚ್ಚುವಂತದ್ದು, ಸಾವಿರಾರು ಕೋಟಿ ರೂಗಳ ರೈತರ ಸಾಲ ಮನ್ನಾ ಮಾಡುವ ಮೂಲಕ ಅನ್ನದಾತರ ನೆರವಿಗೆ ಸಿಂಗ್ ಬಂದಿದ್ದರು ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಓರ್ವ ನಿಷ್ಟಾವಂತ ನಾಯಕರಾಗಿ ಪಕ್ಷ ಹಾಗೂ ದೇಶಕ್ಕೆ ಅವರು ಸಲ್ಲಿಸಿದ ಸೇವೆ ಸ್ಮರಣೀಯವಾಗಿದ್ದು, ಮನಮೋಹನ್ ಸಿಂಗ್ ಅವರ ನಿಧನದಿಂದ ದೇಶಕ್ಕೆ ಅಪಾರ ನಷ್ಟವಾಗಿದೆ ಎಂದು ಅಭಿಪ್ರಾಯಪಟ್ಟರು.

ಚಿತ್ರ ೨೭ ಕೆ.ಎಲ್.ಆರ್. ೦೪ : ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆಹೆಚ್. ಮುನಿಯಪ್ಪ ದೆಹಲಿಯ ಮನಮೋಹನ್‌ಸಿಂಗ್ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net