

ಕೋಲಾರ: ಮಹಿಳಾ ಸ್ವ-ಸಹಾಯ ಸಂಘಗಳು ಸಾಲ ಪಡೆಯುವುದರ ಜತೆಗೆ ಮರು ಪಾವತಿಗೆ ಹೆಚ್ಚಿನ ಗಮನ ನೀಡಬೇಕು, ವಾರಕ್ಕೊಮ್ಮೆ ಸಭೆ ನಡೆಸಿ, ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಿ, ಮಧ್ಯವರ್ತಿಗಳ ಮಾತಿಗೆ ಮರುಳಾಗಬೇಡಿ ಎಂದು ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ತಾಲೂಕಿನ ದಿಂಬದ ಕಲ್ಯಾಣ ಮಂಟಪದಲ್ಲಿ ಶನಿವಾರ ಕೋಲಾರ ಕಸಬಾ ದಕ್ಷಿಣ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕಿನಿಂದ 57 ಮಹಿಳಾ ಸ್ವಸಹಾಯ ಸಂಘಗಳಿಗೆ 2.85 ಕೋಟಿ ರೂ. ಬಡ್ಡಿರಹಿತ ಸಾಲ ವಿತರಿಸಿ ಮಾತನಾಡಿ, ಡಿಸಿಸಿ ಬ್ಯಾಂಕಿಗೆ ಮಹಿಳೆಯರೇ ಶಕ್ತಿ. ಪಡೆದ ಸಾಲವನ್ನು ಸಮರ್ಪಕವಾಗಿ ಮರುಪಾವತಿಸುವ ಮೂಲಕ ಬ್ಯಾಂಕ್ ಅಭಿವೃದ್ಧಿಗೆ ಸಹಕರಿಸಬೇಕು. ಅವಿಭಜಿತ ಜಿಲ್ಲೆಯ 7 ಲಕ್ಷ ಮಹಿಳೆಯರಿಗೆ ಸಾಲ ನೀಡಿದ್ದೇವೆ, ಪ್ರತಿ ಕುಟುಂಬಕ್ಕೂ ಸೌಲಭ್ಯ ತಲುಪಿಸುವುದು ನಮ್ಮ ಗುರಿ ಎಂದರು.
ಮಹಿಳೆಯರು ಉಳಿತಾಯದ ಹಣವನ್ನು ಡಿಸಿಸಿ ಬ್ಯಾಂಕಿನಲ್ಲೇ ಠೇವಣಿ ಇಡಬೇಕು, ಪಾರದರ್ಶಕತೆಗೆ ಒತ್ತು ನೀಡಿದ್ದೇವೆ, ನಗದು ವಹಿವಾಟಿನಿಂದ ಭ್ರಷ್ಟತೆ ಮತ್ತು ಅನುಮಾನಗಳಿಗೆ ಎಡೆಮಾಡಿಕೊಡುವುದರಿಂದ ನಿಮಗೆ ನೀಡಿರುವ ಸಾಲದ ಮೊತ್ತವನ್ನು ನೇರವಾಗಿ ನಿಮ್ಮ ಉಳಿತಾಯ ಖಾತೆಗಳಿಗೆ ಹಾಕಿದ್ದು, ಎಟಿಎಂ ಕಾರ್ಡ್ ಮೂಲಕ ಡ್ರಾ ಮಾಡಿಕೊಳ್ಳಿ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ವಾಣಿಜ್ಯ ಬ್ಯಾಂಕನವರು ಸಾಲ ಕೊಡುತ್ತಾರೆ. ಆದರೆ ಅವರು ಕೊಡುವ ಸಾಲಕ್ಕೂ, ಡಿಸಿಸಿ ಬ್ಯಾಂಕ್ ನೀಡಿದ ಸಾಲಕ್ಕೂ ವ್ಯತ್ಯಾಸ ಇದೆ. ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗಿದೆ. 7 ಲಕ್ಷ ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗಿದ್ದೇವೆ ಎಂದರು.
ಶಾಸಕ ಕೆ.ಶ್ರೀನಿವಾಸಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಯಲವಾರ ಸೊಣ್ಣೇಗೌಡ, ಕಸಬಾ ಸೊಸೈಟಿ ಅಧ್ಯಕ್ಷ ಚೋಳಘಟ್ಟ ಶ್ರೀನಿವಾಸ್, ಸಿಇಒ ವೆಂಕಟೇಶ್, ಸೊಸೈಟಿ ನಿರ್ದೇಶಕರಾದ ದೊಡ್ಡಹಸಾಳ ವೆಂಕಟೇಶ್, ಕೂಟೇರಿ ವೆಂಕಟೇಶಪ್ಪ, ಟಿ.ಶ್ರೀನಿವಾಸ್, ಶ್ರೀನಿವಾಸಪ್ಪ, ಪದ್ಮಮ್ಮ, ಸರೊಜಮ್ಮ ಇತರರಿದ್ದರು.