ಮಡಿವಾಳ ಸಮಾಜದ ಸಮುದಾಯ ಭವನ ಹಾಗೂ ವಸತಿ ನಿಲಯ ನಿರ್ಮಾಣಕ್ಕೆ ಮೂವರು ಶಾಸಕರಿಂದ ೩೦ ಲಕ್ಷ ಅನುದಾನ ಘೋಷಣೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಮಡಿವಾಳ ಸಮಾಜದ ಸಮುದಾಯ ಭವನ, ವಸತಿ ನಿಲಯ ನಿರ್ಮಾಣಕ್ಕೆ ನನ್ನ ಹಾಗೂ ಎಂ.ಎಲ್.ಸಿ.ಗಳಾದ ಇಂಚರ ಗೋವಿಂದರಾಜು ಮತ್ತು ಎಂ.ಎಲ್.ಅನಿಲ್‌ಕುಮಾರ್ ರವರ ಅನುದಾನ ಸೇರಿ ತಲಾ ೧೦ ಲಕ್ಷ ರೂ.ಗಳು ಸೇರಿ ೩೦ ರೂ.ಗಳ ಅನುದಾನವನ್ನು ನೀಡಲಾಗುವುದು. ಇದರ ಜೊತೆಗೆ ಸರ್ಕಾರದಿಂದಲೂ ವಿಶೇಷ ಅನುದಾನವನ್ನು ಕೊಡಿಸುವುದಾಗಿ ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಶನಿವಾರ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಣ್ಣಪುಟ್ಟ ಸಮಾಜಗಳನ್ನು ಸಹ ಜೊತೆಯಲ್ಲಿ ಕರೆದುಕೊಂಡು ಹೋಗುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಪ್ರತಿಯೊಂದು ಸಮಾಜದಲ್ಲೂ ಸಹ ವಿದ್ಯಾವಂತರು ಮತ್ತು ಬುದ್ಧಿವಂತರು ಇರಬೇಕು. ತಮ್ಮ ಸಮುದಾಯಕ್ಕೆ ಆಗುವ ಅನ್ಯಾಯವನ್ನು ಹಾಗೂ ಸಮಸ್ಯೆಗಳನ್ನು ಕೇಳಿ ಪಡೆಯಲು ಸಾಧ್ಯವಾಗುತ್ತದೆ. ಸಮುದಾಯ ಭವನ ಹಾಗೂ ವಸತಿ ನಿಲಯ ನಿರ್ಮಾಣಕ್ಕೆ ಅವಶ್ಯಕತೆ ಇದ್ದರೆ ಉಳಿದ ಜನಪ್ರತಿನಿಧಿಗಳ ಕಡೆಯಿಂದಲೂ ಅನುದಾನ ಕೊಡಿಸಲು ಸಿದ್ದ ಎಂದರು.

ಯಾವುದೇ ಸಮುದಾಯಗಳಿಗೆ ಸರ್ಕಾರದ ಯೋಜನೆಗಳು ತಲುಪದೇ ಇದ್ದಾಗ ಜನಪ್ರತಿನಿಧಿಗಳ ಗಮನಕ್ಕೆ ತನ್ನಿ ಅವುಗಳನ್ನು ತಲುಪಿಸುವ ಕೆಲಸವನ್ನು ಮಾಡತ್ತೇವೆ. ಸಮಾಜದ ಮುಖಂಡರು ಅಂತಹವರನ್ನು ಗುರುತಿಸಿ ಸೌಲಭ್ಯಗಳನ್ನು ನೀಡುವ ಕೆಲಸವನ್ನು ಮಾಡಬೇಕು ಎಂದರು.

ಎಂಎಲ್ಸಿ ಅನಿಲ್ ಕುಮಾರ್ ಮಾತನಾಡಿ, ಸಣ್ಣಪುಟ್ಟ ಸಮಾಜದ ಜಯಂತಿಗಳ ಆಚರಣೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡಬೇಕು. ಮೀಸಲಾತಿ ಸರ್ಕಾರದ ಅಂತದಲ್ಲಿ ತೀರ್ಮಾನವಾಗುತ್ತದೆ. ಅಂತಹ ಸಂದರ್ಭದಲ್ಲಿ ಸಹ ಅಧಿವೇಶನದಲ್ಲಿ ನಿಮ್ಮ ಪರವಾಗಿ ಇರುತ್ತೇವೆ. ಸಮುದಾಯ ಅಭಿವೃದ್ಧಿಗೆ ಶಿಕ್ಷಣ ಮುಖ್ಯವಾಗಿದೆ. ವಸತಿ ನಿಲಯ ನಿರ್ಮಾಣ ಮಾಡಲು ಮುಂದಾಗಿ ನಾವು ಜೊತೆಗೆ ಇದ್ದು ಅನುದಾನ ಕೊಡತ್ತೇವೆ ಎಂದು ತಿಳಿಸಿದರು .

ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಮಡಿವಾಳ ಸಮುದಾಯವನ್ನು ಎಲ್ಲರೂ ಗೌರವಿಸಬೇಕಾಗಿದೆ. ಅವರನ್ನು ಕೀಳರಿಮೆಯಿಂದ ಕಾಣಬಾರದು. ಸಮುದಾಯವನ್ನು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿಸುವ ವಿಚಾರದಲ್ಲಿ ಸಮುದಾಯದ ಪರವಾಗಿ ನಾವಿರುತ್ತೇವೆ. ಸರ್ಕಾರದ ಮೇಲೆ ಒತ್ತಡವನ್ನು ತರುತ್ತೇವೆ. ಸಮುದಾಯ ಭವನ ನಿರ್ಮಾಣಕ್ಕೆ ೧೦ ಲಕ್ಷ ರೂ.ಗಳನ್ನು ನೀಡುವುದಾಗಿ ಭರವಸೆ ನೀಡಿದರು.

ಮಡಿವಾಳ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ವಿ.ಮಂಜುನಾಥ್ ಮಾತನಾಡಿ, ಸರ್ಕಾರದಿಂದ ನಮಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ನಮ್ಮ ಸಮುದಾಯ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಬೇಕು. ಸಮುದಾಯವನ್ನು ಮೇಲೆತ್ತುವ ಕೆಲಸ ಮಾಡಬೇಕಾಗಿದೆ. ಕೋಲಾರ ನಗರದ ಧೋಬಿಘಾಟ್‌ನಲ್ಲಿ ಸಮುದಾಯ ಭವನವನ್ನು ನಿರ್ಮಿಸಿಕೊಡಬೇಕು. ಹಾಗೂ ಅನ್ನಪೂರ್ಣಮ್ಮ ವರದಿಯನ್ನು ಸರ್ಕಾರಕ್ಕೆ ಮುಟ್ಟಿಸಿ ಎಸ್.ಸಿ.ಸಮುದಾಯಕ್ಕೆ ಸೇರುವಂತೆ ಮಾಡಬೇಕೆಂದು ಮನವಿ ಮಾಡಿದರು.

ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಉಪಾಧ್ಯಕ್ಷೆ ಸಂಗೀತಾ, ಅಪರ ಜಿಲ್ಲಾಧಿಕಾರಿ ಮಂಗಳಾ, ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ವೈ ಶಿವಕುಮಾರ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ ಮುಂತಾದವರಿದ್ದರು.

ಚಿತ್ರ ೦೧ ಕೆ.ಎಲ್.ಆರ್. ೦೨ : ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಮಡಿವಾಳ ಮಾಚೀದೇವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಶಾಸಕ ಕೊತ್ತೂರು ಮಂಜುನಾಥ್, ಎಂ.ಎಲ್.ಸಿ.ಗಳಾದ ಇಂಚರ ಗೋವಿಂದರಾಜು, ಎಂ.ಎಲ್.ಅನಿಲ್‌ಕುಮಾರ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net