

ಮೈಸೂರು: ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಚಿಕ್ಕ ವಯಸ್ಸಿನಲ್ಲಿಯೇ ಜಾಗೃತಿ ಮೂಡಿಸಿದರೆ ಮಕ್ಕಳು ಆರೋಗ್ಯಯುತ ಜೀವನ ನಡೆಸಲು ಹಾಗೂ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಹೇಳಿದರು.
ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ವತಿಯಿಂದ ನಿರ್ಮಿಸಿರುವ ಜಾಗೃತಿ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ, ಬೆಳೆದ ಮಕ್ಕಳ ಜತೆಗೆ ಬೆಳೆಯುವ ಮಕ್ಕಳಿಗೆ ಮದ್ಯ ಮತ್ತು ಮಾದಕ ವಸ್ತುಗಳಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು ಬಗ್ಗೆ ಅರಿವು ಮೂಡಿಸುವ ಅನಿವಾರ್ಯತೆ ಇದೆ ಎಂದರು.
ಹಲವು ವರ್ಷಗಳಿಂದ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ದಸರಾ ಸಂದರ್ಭದಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಜಾಗೃತಿ ಮಳಿಗೆಯನ್ನು ನಿರ್ಮಿಸಿ ಮದ್ಯ ಸೇರಿದಂತೆ ಇತರ ಮಾದಕವಸ್ತುಗಳಿಂದಾಗುವ ದುಷ್ಪರಿಣಾಮಗಳ ಜಾಗೃತಿ ಮೂಡಿಸುತ್ತಿದೆ. ದಸರಾ ವಸ್ತುಪ್ರದರ್ಶನಕ್ಕೆ ಬರುವ ಜನಸಂಖ್ಯೆಯಲ್ಲಿ ಶೇ.30ರಿಂದ 40ರಷ್ಟು ಜನರು ಮಂಡಳಿಯ ಮಳಿಗೆಗೆ ಭೇಟಿ ನೀಡಿದರೆ ಸಾಕು, ಅವರಿಗೆ ಆಗುವ ಅರಿವಿನಿಂದ ಮತ್ತಷ್ಟು ಜನರಿಗೆ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಸಹಾಯವಾಗುತ್ತದೆ ಎಂದರು.
ಪಠ್ಯ ಪುಸ್ತಕಗಳಲ್ಲಿ ಮದ್ಯ ಮತ್ತು ಮಾದಕ ವಸ್ತುಗಳಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಪಾಠ ಸೇರಿಸಬೇಕು. ತಾಯಿ ಮತ್ತು ಮಗುವಿನ ಮಧ್ಯ ನಡೆಯುವ ಸಂಭಾಷಣೆಯ ರೀತಿಯಲ್ಲಿ ಪಠ್ಯ ಇದ್ದರೆ ಹೆಚ್ಚು ಪರಿಣಾಮಕಾರಿಯಾಗಿ ಮಕ್ಕಳ ಮನಸ್ಸನ್ನು ವಿಷಯ ಮುಟ್ಟುತ್ತದೆ ಎಂದರು.
ರಾಜ್ಯದ ಎಲ್ಲ ಪ್ರದೇಶಗಳಲ್ಲಿ, ಅದರಲ್ಲೂ ನಗರ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆ ಹೆಚ್ಚಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಪರವಾನಗಿ ಪಡೆಯದೆ ಮದ್ಯ ಮಾರಾಟ ಮಾಡುವುದಲ್ಲದೆ, ನಕಲಿ ಮದ್ಯಗಳ ಮಾರಾಟದಿಂದ ಸರ್ಕಾರಕ್ಕೆ ತೆರಿಗೆ ವಂಚನೆಯಾಗುತ್ತಿದೆ. ಕಿರಾಣಿ ಅಂಗಡಿಗಳು, ಬೀಡಾ ಅಂಗಡಿಗಳಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಮಾರಾಟ, ಮಹಿಳೆಯರು, ಎಳೆ ಮಕ್ಕಳಲ್ಲಿ ದುಷ್ಪರಿಣಾಮ ಬಿರುತ್ತಿದೆ. ನಕಲಿ ಮದ್ಯ ಮಾರಾಟದ ವ್ಯವಹಾರ ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ನಡೆಯುತ್ತಿದ್ದು, ಜನಸಾಮಾನ್ಯರಲ್ಲಿ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ಮಹೇಶ್, ಮತ್ತಿತರರು ಉಪಸ್ಥಿತರಿದ್ದರು.