ಮಕ್ಕಳ ಸಾಮರ್ಥ್ಯವನ್ನು ಶಿಕ್ಷಕರು ಅರಿಯಿರಿ

12NGD2
Published on

ನಂಜನಗೂಡು: ಮಕ್ಕಳ ಕಲ್ಪನೆ ಹಾಗೂ ಸಾಮರ್ಥ್ಯವನ್ನು ಶಿಕ್ಷಕರು ಅರ್ಥ ಮಾಡಿಕೊಂಡರೆ ಮಾತ್ರ ಪಠ್ಯ ಹಾಗೂ ಪಠ್ಯೇತರ ಕಲಿಕೆಯಲ್ಲಿ ಮಕ್ಕಳು ಉತ್ತಮ ಪ್ರಗತಿ ಸಾಧಿಸುವಂತೆ ನೋಡಿಕೊಳ್ಳಬಹುದು ಎಂದು ಕಿಡ್ಸ್ ಪ್ಯಾರಡೈಸ್ ಸಂಸ್ಥೆ ಮುಖ್ಯಸ್ಥೆ ಕಾವ್ಯಾ ಹೇಳಿದರು.


ತಾಲೂಕಿನ ಸಿಂಧುವಳ್ಳಿಯ ಸ್ಪಂದನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳ ಸರ್ವಾಂಗೀಣ ಪ್ರಗತಿಗೆ ನೆರವಾಗಲು ಹಾಗೂ ಅವರಿಗೆ ಅರ್ಥಪೂರ್ಣ ಶಿಕ್ಷಣ ಲಭ್ಯವಾಗುವಂತೆ ನೋಡಿಕೊಳ್ಳಲು ಪಾಲಕರು ಹಾಗೂ ಶಿಕ್ಷಕರು ಮಕ್ಕಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಮಗು ಕೇವಲ ಶಾಲೆಯಲ್ಲಿ ಮಾತ್ರವಲ್ಲದೆ ಮನೆಯ ವಾತಾವರಣದಲ್ಲಿಯೂ ಕಲಿಯುತ್ತದೆ. ಬಾಲ್ಯಾವಸ್ಥೆ ಹೆಚ್ಚು ಸಂಕೀರ್ಣ ಅಂಶಗಳಿಂದ ಕೂಡಿದ್ದು ಸಮಾಜದ ಬದಲಾವಣೆಗಳು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಪಠ್ಯಕ್ರಮ, ಕಲಿಕಾ ವಿಧಾನ ಹಾಗೂ ಕಲಿಕಾ ವಾತಾವರಣ ಮಕ್ಕಳ ಬೆಳವಣಿಗೆಗೆ ಪೂರಕವಾಗಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.


ಸ್ಪಂದನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಮೇಬಲ್ ಮಾತನಾಡಿ, ನಮ್ಮ ಸಂಸ್ಥೆಯಿಂದ ತಾಲೂಕಿನ ಗ್ರಾಮೀಣ ಪ್ರದೇಶದ 12 ಹಳ್ಳಿಗಳಲ್ಲಿ ಕಲಿಕಾ ಕೇಂದ್ರಗಳನ್ನು ತೆರೆದು ಮಕ್ಕಳ ಅಧ್ಯಯನಕ್ಕೆ ನೆರವು ನೀಡಲಾಗುತ್ತಿದ್ದು, 6 ಹಳ್ಳಿಗಳಲ್ಲಿ ಮಕ್ಕಳ ಕ್ಲಬ್ ಮತ್ತು ಪಾರ್ಲಿಮೆಂಟ್‌ಗಳನ್ನು ರಚಿಸಲಾಗಿದೆ ಎಂದು ಹೇಳಿದರು.


ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಂಜಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಿಸ್ಟರ್ ರೋಸ್ಲಿನ್, ನವೀನ್, ವೆರೋನಿಕ, ಶಿಕ್ಷಕರಾದ ರೋಜಾ, ಸೋನಿ, ಭಾಗ್ಯ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net