

ಎನ್.ಆರ್.ಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ, ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಸಂಘಟನೆಯ ರಾಜ್ಯ ಸಂಚಾಲಕರ ಆಯ್ಕೆಯು ಹರಿಹರದಲ್ಲಿ ಅಯೋಜಿಸಿರುವ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರ ಹಾಗೂ ಸರ್ವಸದಸ್ಯರ ಸಭೆಯಲ್ಲಿ ನಡೆಯಲಿದೆ ಎಂದು ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಮಟ್ಟದ ತರಬೇತಿ ಹಾಗೂ ಸರ್ವ ಸದಸ್ಯರ ಸಭೆಯ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಕರ್ನಾಟಕದಲ್ಲಿ ಅನೇಕ ದಲಿತ ಸಂಘರ್ಷ ಸಮಿತಿಗಳು ಸ್ಥಾಪನೆಯಾಗಿವೆ. ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಅತ್ಯಂತ ಪ್ರಬಲವಾಗಿದೆ. ಪಾಂಡುರಂಗ ಸ್ವಾಮಿ ನೇತೃತ್ವದ ಈ ಸಂಘಟನೆ ರಾಜ್ಯಾದ್ಯಂತ ಶೋಷಿತರ ಧ್ವನಿಯಾಗಿ ಹೋರಾಡುತ್ತಿದೆ. ವಸತಿ ಶಾಲೆಗಳ ಪರವಾಗಿ ಹೋರಾಟ ಮಾಡಿದ್ದರಿಂದ ಸರ್ಕಾರ ಹೋಬಳಿಗೊಂದು ವಸತಿ ಶಾಲೆಯನ್ನು ಮಂಜೂರು ಮಾಡಿದೆ ಎಂದರು.
ಭೂಮಿಗಾಗಿ ಹೋರಾಟ ಕೊಡಗಿನಿಂದ ಪ್ರಾರಂಭಿಸಿದ್ದೇವೆ. ನಾಯಕತ್ವದ ಬದಲಾವಣೆಗಾಗಿ ದಾವಣಗೆರೆ ಜಿಲ್ಲೆ ಹರಿಹರದಲ್ಲಿ ರಾಜ್ಯ ಮಟ್ಟದ ತರಬೇತಿ ಹಾಗೂ ಸರ್ವ ಸದಸ್ಯರ ಸಭೆ ಏರ್ಪಡಿಸಲಾಗಿದೆ. ಈ ಸಭೆಗೆ ರಾಜ್ಯದ ಎಲ್ಲ ಜಿಲ್ಲೆಗಳ ಡಿಎಸ್‌ಎಸ್ ಸಂಘಟನೆಯ ಜಿಲ್ಲೆ, ತಾಲೂಕು, ಗ್ರಾಮ ಮಟ್ಟ ಹಾಗೂ ಹೋಬಳಿ ಮಟ್ಟದ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಸಂಘಟನೆಯ ರಾಜ್ಯ ಸಾರಥಿಯನ್ನು ಮುಂದಿನ ಮೂರು ವರ್ಷದ ಅವಧಿಗೆ ಆಯ್ಕೆ ಮಾಡಲಾಗುತ್ತದೆ ಎಂದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಮಹಿಳಾ ಒಕ್ಕೂಟದ ಸಂಚಾಲಕಿ ಎಂ.ವಿ.ಭವಾನಿ, ಜಿಲ್ಲಾ ಸಂಚಾಲಕ ಎನ್.ಆರ್.ಪುರದ ರಾಜೇಶ್, ಜಿಲ್ಲಾ ದೌರ್ಜನ್ಯ ಸಮಿತಿ ಸದಸ್ಯ ಶೆಟ್ಟಿಕೊಪ್ಪ ಎಂ.ಮಹೇಶ್, ವಾಲ್ಮೀಕಿ ನಾಯಕ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್, ಪದಾಧಿಕಾರಿ ಅಬ್ದುಲ್ ರೆಹಮಾನ್ ಇದ್ದರು.