

ಬುದ್ಧ ಕರ್ಮ ಸಿದ್ಧಾಂತವನ್ನು, ದೇವರ ಇರುವಿಕೆಯನ್ನು ನಂಬಲಿಲ್ಲ. ಆದರೆ ಮನುಷ್ಯನ ನೈತಿಕತೆ, ನಡವಳಿಕೆಗಳಿಗೆ ಹೆಚ್ಚು ಆದ್ಯತೆ ನೀಡಿದ್ದಾನೆ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಹೇಳಿದರು.
ನಗರದಲ್ಲಿರುವ ತಮ್ಮ ಕಚೇರಿಯಲ್ಲಿ ಸೋಮವಾರ ನಡೆದ 2569ನೇ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬುದ್ಧನನ್ನು ಭಾರತೀಯರಾದ ನಾವು ಸರಿಯಾದ ರೀತಿ ಅರ್ಥ ಮಾಡಿಕೊಂಡಿದ್ದರೆ ದೇಶದ ಚಿತ್ರಣವೇ ಬದಲಾಗುತ್ತಿತ್ತು. ಬುದ್ಧ ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಸಮಾಜಕ್ಕೆ ಸತ್ಯವನ್ನು ತಿಳಿಸಿಕೊಟ್ಟರು. ಆ ಸತ್ಯವನ್ನು ಇವತ್ತಿಗೂ ಅರ್ಥಮಾಡಿಕೊಂಡಿಲ್ಲ. ಆ ಸತ್ಯವನ್ನು ಅರ್ಥ ಮಾಡಿಕೊಂಡಂತಹ ಚೀನಾ, ಜಪಾನ್ ಇನ್ನಿತರ ದೇಶಗಳು ಎತ್ತರಕ್ಕೆ ಬೆಳೆದು ನಿಂತಿವೆ. ಆದರೆ, ಭಾರತ ದೇಶದಲ್ಲಿ ಬೌದ್ಧ ಧರ್ಮ ಬೆಳೆಯಲು ಅವಕಾಶವನ್ನೇ ಕೊಡಲಿಲ್ಲ. ಮೌಢ್ಯ, ಕಂದಾಚಾರಗಳ ಮೂಲಕ ಕೆಲವರು ಇವತ್ತಿಗೂ ನಮ್ಮನ್ನೆಲ್ಲ ಕತ್ತಲೆಯ ಕೂಪದಲ್ಲಿ ತಳ್ಳಿ ಅಂಧಕಾರದಲ್ಲೇ ಬದುಕಬೇಕು ಎಂದು ಬಯಸುತ್ತಿದ್ದಾರೆ ಎಂದರು.
ಬುದ್ಧನ ತತ್ವಗಳಲ್ಲಿ ವಿಧ್ಯೆಗಿಂತ ಗುಣ ದೊಡ್ಡದು ಎಂದು ಒತ್ತಿ ಹೇಳಲಾಗಿದೆ. ಒಳ್ಳೆಯ ಗುಣ ನಡವಳಿಕೆ, ಚಿಂತನೆಗಳನ್ನು ನಮ್ಮ ತಲೆಯಲ್ಲಿ ತುಂಬಿಕೊಳ್ಳಬೇಕು ನಮ್ಮನ್ನು ನಾವೇ ನಿಯಂತ್ರಿಸಿಕೊಳ್ಳಬೇಕು. ಆಸೆ ದುಃಖಕ್ಕೆ ಮೂಲ ಎಂಬ ವಿಚಾರದ ಮೂಲಕ ನಮಗೆ ಸಂದೇಶವನ್ನು ಕೊಟ್ಟಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ಸೋಮಶೇಖರ್, ಶ್ರೀಧರ್, ಆಶ್ರಯ ಸಮಿತಿ ಸದಸ್ಯರಾದ ಗುಣಶೇಖರ್, ಮಹ್ಮದ್ ಫಾರೂಖ್, ಅಶೋಕಪುರಂ ದೊಡ್ಡ ಗರಡಿ ಅಧ್ಯಕ್ಷ ಜೋಗಿ ಮಹೇಶ್, ಪುರಂ ಮಂಜುನಾಥ್, ರಮೇಶ್, ಶಂಕರ್, ಸಿದ್ದರಾಜು (ಸಿದ್ದು), ಕುಮಾರ್, ವಿಜಯ್ ಕುಮಾರ್, ಮಹದೇವೇಗೌಡ, ರಾಮಾನುಜ ರಮೇಶ್ ಸೇರಿದಂತೆ ಅನೇಕರು ಇದ್ದರು.