ಭವಿಷ್ಯದ ರಾಜಕಾರಣಿಗಳಿಗೆ ಎಚ್. ವಿಶ್ವನಾಥ್ ಮಾದರಿ

Published on

ಕೆ.ಆರ್.ನಗರ: ನಾಡಿನ ಸಕ್ರಿಯ ಮತ್ತು ಸಕಾರಾತ್ಮಕ ರಾಜಕಾರಿಣಿಯಾಗಿರುವ ಎಚ್.ವಿಶ್ವನಾಥ್ ಅವರು ಭವಿಷ್ಯದ ರಾಜಕಾರಣಿಗಳಿಗೆ ಮಾದರಿ ಎಂದು ಯಡತೊರೆ ಯೋಗಾನಂದೇಶ್ವರ ಮಠದ ಶ್ರೀ ಶಂಕರಭಾರತೀ ಸ್ವಾಮೀಜಿ ನುಡಿದರು.

ಪಟ್ಟಣದ ಸಿ.ಎಂ.ರಸ್ತೆಯಲ್ಲಿರುವ ಎಡತೊರೆ ಯೋಗಾನಂದೇಶ್ವರ ಮಠದಲ್ಲಿ ವಿಶ್ವನಾಥ್ ಅಭಿಮಾನಿಗಳು ಮತ್ತು ಪಟ್ಟಣದ ನಾಗರಿಕರು ಭಾನುವಾರ ಹಮ್ಮಿಕೊಂಡಿದ್ದ ವಿದೇಶ ಪ್ರಯಾಣದ ಶುಭ ಹಾರೈಕೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ರಾಜಕಾರಣಿಗಳು ಸದಾ ಸ್ವಹಿತಾಸಕ್ತಿಗೆ ಕೆಲಸ ಮಾಡುತ್ತಾರೆ. ಆದರೆ ನಮ್ಮೂರಿನ ಈ ನಾಯಕ ರಾಜಕೀಯದ ಜತೆಗೆ ಸಾಹಿತ್ಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದು, ಇದು ಎಲ್ಲರೂ ಹೆಮ್ಮೆಪಡುವ ವಿಚಾರ ಎಂದರು.

ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡು ಯಶಸ್ವಿಯಾಗಿರುವ ಆ ದೇಶದ ಜನರ ಜೀವನ ಮತ್ತು ಸಂಸ್ಕೃತಿಯನ್ನು ಅಭ್ಯಸಿಸಿ ಪುಸ್ತಕದ ರೂಪದಲ್ಲಿ ಪ್ರಕಟಿಸಲು ಹೊರಟಿರುವ ವಿಶ್ವನಾಥ್ ಅವರ ಚಿಂತನೆ ಮತ್ತು ಮನಸ್ಸಿನ ಭಾವನೆ ಎಲ್ಲರಿಗೂ ದಾರಿ ದೀಪವಾಗಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮುಡಾ ಮಾಜಿ ಅಧ್ಯಕ್ಷ ಎಚ್.ಎನ್.ವಿಜಯ್, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ, ನವನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಎಸ್.ಪಿ.ತಮ್ಮಯ್ಯ, ತಾಲೂಕು ಕಸಾಪ ಅಧ್ಯಕ್ಷ ಡಿಂಡಿಮಶಂಕರ್, ಅರ್ಥಶಾಸ್ತ್ರ ಉಪನ್ಯಾಸಕ ಡಿ.ಶ್ರೀನಿವಾಸ್ ಮಾತನಾಡಿ, ಮಾಜಿ ಸಚಿವರ ವಿದೇಶ ಅಧ್ಯಯನ ಪ್ರವಾಸಕ್ಕೆ ಶುಭಕೋರಿದರು.

ಎಚ್.ವಿಶ್ವನಾಥ್ ಅವರ ಪತ್ನಿ ಶಾಂತಮ್ಮ, ಜಿ.ಪಂ.ಮಾಜಿ ಸದಸ್ಯರಾದ ಅಮಿತ್.ವಿ.ದೇವರಹಟ್ಟಿ, ಜಿ.ಆರ್.ರಾಮೇಗೌಡ, ಪುರಸಭೆ ಮಾಜಿ ಅಧ್ಯಕ್ಷ ತಮ್ಮನಾಯಕ, ಸದಸ್ಯ ಕೆ.ಪಿ.ಪ್ರಭುಶಂಕರ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಕಾಂಗ್ರೆಸ್ ನಗರಾಧ್ಯಕ್ಷ ಎಂ.ಜೆ.ರಮೇಶ್, ಜಿಲ್ಲಾ ಜಾನಪದ ಪರಿಷತ್ ಸದಸ್ಯ ಜಿ.ಪ್ರಕಾಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ರಾಜಶೇಖರ್, ಮುಖಂಡರಾದ ವೇಣುಗೋಪಾಲ್, ಶಿವಾಜಿಗಣೇಶನ್, ಎ.ಟಿ.ಗೋಪಾಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net