ಭತ್ತ ಕಟಾವಿಗೆ ತೊಂದರೆ

ಭತ್ತದ ಗದ್ದೆಯಲ್ಲಿಯೇ ಉಳಿದಿರುವ ಭತ್ತದ ಹುಲ್ಲು.
Published on

ಬಸವರಾಜ್ ಭದ್ರಾವತಿ

ತಾಲೂಕಿನೆಲ್ಲೆಡೆ ಮುಂಗಾರಿನ ಅಬ್ಬರ ಜೋರಾಗಿದ್ದು ಭತ್ತ ಬೆಳೆದ ಬೆಳೆಗಾರ ಕಟಾವು ಮಾಡಲಾಗದೆ ನಿತ್ಯ ಆಗಸ ನೋಡುವಂತಾಗಿದೆ. ಯಾವಾಗ ಕಟಾವು ಮಾಡುವುದು ಎಂದು ಯೋಚಿಸುತ್ತಿರುವ ರೈತರಿಗೆ ಬೆಲೆ ಇಳಿಕೆಯೂ ಶಾಪವಾಗುತ್ತಿದೆ.

ಕೃಷಿ ಇಲಾಖೆ ಸಮೀಕ್ಷೆಯಂತೆ ತಾಲೂಕಿನಲ್ಲಿ 6985 ಹೆಕ್ಟೇರ್ ಭತ್ತ ಬೆಳೆಯುವ ಕೃಷಿ ಭೂಮಿ ಇದೆ. ಬೇಸಿಗೆ ಹಂಗಾಮಿನಲ್ಲಿ 4200 ಹೆಕ್ಟೇರ್ ಭೂಮಿಯಲ್ಲಿ ಮಾತ್ರ ಭತ್ತ ಬೆಳೆಯಲಾಗಿದೆ. ಈಗಾಗಲೇ ಶೇ. 50ರಷ್ಟು ಕಟಾವು ಮಾಡಲಾಗಿದ್ದು ಇನ್ನೂ ಶೇ.50ರಷ್ಟು ಭತ್ತ ಕಟಾವು ಮಾಡಬೇಕಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಮಳೆಯ ಪ್ರಮಾಣ ಅಧಿಕವಾಗಿದೆ. ಮೇ ನಲ್ಲಿ 46 ಮಿ.ಮೀ. ಮಳೆಯಾಗಬೇಕಿದ್ದು 124 ಮಿ.ಮೀ ಮಳೆಯಾಗಿರುವುದರಿಂದ ಭತ್ತದ ಕಟಾವಿಗೆ ತೊಂದರೆಯಾಗಿದೆ.

ಮೊದಲು ಕಟಾವಿಗೆ ಕೂಲಿ ಕಾರ್ಮಿಕರ ಸಮಸ್ಯೆ ಉಂಟಾಗುತ್ತಿತ್ತು. ಆದ್ದರಿಂದ ಯಾಂತ್ರೀಕೃತ ಕಟಾವು ಮೊರೆ ಹೋದ ರೈತರಿಗೆ ಇದೀಗ ವಾಹನದ ಬಾಡಿಗೆ ದರ ಹೆಚ್ಚಾಗಿರುವುದು ಸಮಸ್ಯೆಗೆ ಕಾರಣವಾಗಿದೆ. ಮಳೆ ಹೀಗೆಯೆ ಮುಂದುವರಿದರೆ ಭತ್ತ ಗದ್ದೆಯಲ್ಲೆ ಉದುರುವ ಮೂಲಕ ಬೆಳೆ ನಷ್ಟ ಸಂಭವಿಸುವ ಸಾಧ್ಯತೆ ಇದೆ.

ಕ್ವಿಂಟಾಲ್‌ಗೆ 2400 ರೂ. ಇದ್ದ ಭತ್ತದ ದರ ಈಗ 2200 ರೂ.ಗೆ ಕುಸಿದಿದೆ. ಭತ್ತ ಖರೀದಿಸುವ ದಲ್ಲಾಳಿಗಳು ಭತ್ತಕ್ಕೆ ಬೆಲೆಯಿಲ್ಲ ಎಂಬುದು ಸೇರಿದಂತೆ ಹಲವು ಕಾರಣಗಳನ್ನು ಹೇಳಿ ರೈತರಿಂದ ಭತ್ತ ಖರೀದಿಸಲು ಬೆಲೆ ಕಡಿಮೆ ಮಾಡುತ್ತಿದ್ದಾರೆ. ಸರ್ಕಾರವು ಕ್ವಿಂಟಾಲ್ ಭತ್ತಕ್ಕೆ 3000 ರೂ. ಬೆಂಬಲ ಬೆಲೆ ನಿಗದಿ ಮಾಡಬೇಕೆಂಬುದು ಬಹುತೇಕ ರೈತರ ಆಗ್ರಹವಾಗಿದೆ.

ಮೇವಿಗೆ ಸಮಸ್ಯೆ

ಪ್ರಸ್ತುತ ಸಣ್ಣ ಪಿಂಡಿ ಹುಲ್ಲಿಗೆ 30 ರಿಂದ 40 ರೂ. ಹಾಗೂ ದೊಡ್ಡ ಪಿಂಡಿ ಹುಲ್ಲಿಗೆ 300 ರೂ. ವರೆಗೆ ಏರಿಕೆಯಾಗಿತ್ತು. ಆದರೆ ಮಳೆಯಿಂದಾಗಿ ಒಣಹುಲ್ಲಿನ ಸಮಸ್ಯೆ ಜಾಸ್ತಿಯಾಗುತ್ತಿದೆ. ಈಗಾಗಲೆ ಭತ್ತ ಕಟಾವು ಮಾಡಿರುವ ಸಾಕಷ್ಟು ರೈತರು ಹಾಗೂ ಕಟಾವು ಮಾಡಬೇಕಾದ ರೈತರು ಭತ್ತದ ಹುಲ್ಲನ್ನು ಗದ್ದೆಯಲ್ಲಿಯೇ ಬಿಡುತ್ತಿದ್ದಾರೆ. ಹುಲ್ಲು ಯತೇಚ್ಛವಾಗಿ ಬೇರೆಡೆಗೆ ಸರಬರಾಜಾಗುತ್ತಿರುವುದರಿಂದ ಸ್ಥಳೀಯ ಜಾನುವಾರುಗಳಿಗೆ ಮೇವಿಲ್ಲದ ಪರಿಸ್ಥಿತಿ ಎದುರಾಗಲಿದೆ. ಈಗಾಗಲೆ ಭತ್ತದ ಕಾಳು ಕೆಂಪಾಗಿದ್ದು ಎಲ್ಲೆಡೆ ಕಟಾವು ಆರಂಭವಾಗಿದೆ.

ಜಮೀನುಗಳಿಗೆ ಭೇಟಿ

ತಾಲೂಕಿನಲ್ಲಿ ಭತ್ತ ಕಟಾವಿನ ಸಮಯದಲ್ಲಿಯೆ ಪೂರ್ವ ಮುಂಗಾರು ಅಬ್ಬರಿಸಿದ್ದರೂ ಸದ್ಯಕ್ಕೆ ಬಿರುಗಾಳಿ ಬೀಸದೆ ಮಳೆ ಸುರಿದಿದೆ. ಭತ್ತದ ಗದ್ದೆಯಲ್ಲಿ ತೆನೆ ಬೀಳದೆ ಇರುವುದರಿಂದ ರೈತರಿಗೆ ನಷ್ಟವಾಗದು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿ ದೇವೆಂದ್ರಪ್ಪ ಕಡ್ಲೇರ. ಈಗಾಗಲೆ ಶೇ.50ರಷ್ಟು ಕಟಾವು ಮಾಡಲಾಗಿದೆ. ಉಳಿದ ಕಟಾವಿಗೆ ಕಾಯುವಂತಾಗಿದೆ. ಮಳೆ ಮುಂದುವರಿದರೆ ಮಾತ್ರ ಸಮಸ್ಯೆ ಉಂಟಾಗಲಿದೆ. ಆಗ ನಷ್ಟದ ಅಂದಾಜು ಲೆಕ್ಕವನ್ನು ಪಟ್ಟಿ ಮಾಡಿ ಶಿಫಾರಸ್ಸು ಮಾಡಲಾಗುವುದು. ಇಲಾಖೆಯಿಂದ ಭತ್ತ ಬೆಳೆದಿರುವ ಜಮೀನುಗಳಿಗೆ ಭೇಟಿ ನೀಡಲಾಗಿದೆ. ಮಾಹಿತಿ ಸಂಗ್ರಹಿಸಲು ಗ್ರಾಮಲೆಕ್ಕಾಧಿಕಾರಿಗಳಿಗೂ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಸಜ್ಜು ಮಳೆಯ ನಡುವೆಯೇ ಕೃಷಿ ಇಲಾಖೆ ಮುಂಗಾರು ಹಂಗಾಮಿಗೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಸಂಗ್ರಹ ಮಾಡಿಕೊಂಡಿದೆ. ರೈತ ಸಂಪರ್ಕ ಕೇಂದ್ರದಿಂದ ಭತ್ತ, ರಾಗಿ, ಮೆಕ್ಕೆಜೋಳ, ಹಲಸಂದೆ, ತೊಗರಿ ಬಿತ್ತನೆಯನ್ನು ರೈತರ ಬೇಡಿಕೆಗೆ ತಕ್ಕಂತೆ ವಿತರಣೆ ಮಾಡಲಿದೆ. ಕಳಪೆ ರಸಗೊಬ್ಬರ ವಿತರಣೆ ಮಾಡದಂತೆ ರಸಗೊಬ್ಬರ ಅಂಗಡಿಗಳ ಮಾಲೀಕರನ್ನು ಸಹ ಕರೆದು ಜೂನ್ 3 ರಂದು ಸಭೆ ನಡೆಸಲಿ. ಸುಮಾರು 506 ಕ್ವಿಂಟಾಲ್ ಬಿತ್ತನೆ ಬೀಜ ಸಂಗ್ರಹ ಮಾಡಿಕೊಂಡಿದ್ದು ರಸಗೊಬ್ಬರಗಳಾದ ಯೂರಿಯಾ (550)ಟನ್, ಡಿಎಪಿ (375) ಟನ್, ಎಂಒಪಿ (176) ಟನ್, ಎನ್‌ಪಿಕೆ (930) ಟನ್, ಎಸ್‌ಎಸ್‌ಪಿ (48) ಟನ್ ಗೊಬ್ಬರ ಸಂಗ್ರಹಿಸಿಟ್ಟುಕೊಂಡಿದೆ. ರೈತರ ಕೃಷಿ ಚಟುವಟಿಕೆಗೆ ಯಾವುದೇ ತೊಂದರೆ ಆಗದಂತೆ ಮುಂಜಾಗ್ರತೆ ವಹಿಸಿದೆ.

ಭತ್ತ ಕಟಾವು ಮಾಡುವ ರೈತರು ಮಳೆ ನೋಡಿಕೊಂಡು ಕಟಾವು ಮಾಡಬೇಕು. ಕಟಾವು ಮಾಡಿದ ಭತ್ತವನ್ನು ಮಳೆಗೆ ಸಿಲುಕದಂತೆ ಒಣಜಾಗದಲ್ಲಿ ಶೇಖರಣೆ ಮಾಡಿಕೊಳ್ಳುವುದು ಒಳ್ಳೆಯದು. ಮೆಕ್ಕೆಜೋಳ ಬಿತ್ತನೆ ಮಾಡುವವರು ಹದ ನೋಡಿ ಬಿತ್ತನೆ ಮಾಡುವುದು ಸೂಕ್ತ. ಈಗಾಗಲೇ ಶೇ.50ರಷ್ಟು ಭತ್ತ ಕಟಾವು ಮಾಡಲಾಗಿದ್ದು ಮಳೆಯ ಜತೆ ಗಾಳಿ ಬೀಸದಿರುವುದು ಸ್ವಲ್ಪ ಅನುಕೂಲವಾಗಿದೆ. ಬೀಜ, ರಸಗೊಬ್ಬರ ಸಮರ್ಪಕವಾಗಿದ್ದು ರೈತರು ಆತಂಕಪಡುವ ಅಗತ್ಯವಿಲ್ಲ. ದೇವೇಂದ್ರಪ್ಪ ಕಡ್ಲೇರ, ಸಹಾಯಕ ಕೃಷಿ ನಿರ್ದೇಶಕರು, ಭದ್ರಾವತಿ ಮುಂಗಾರು ಪೂರ್ವ ಸುರಿದ ಮಳೆ ಭತ್ತದ ಬೆಳೆಗಾರರಿಗೆ ನಷ್ಟವನ್ನುಂಟು ಮಾಡಿದೆ. ಭತ್ತದ ಹುಲ್ಲು ಮಳೆಗೆ ಸಂಪೂರ್ಣ ಹಾಳಾಗಿದೆ. ಭತ್ತಕ್ಕೆ ಉತ್ತಮ ದರ ಸಿಗುತ್ತಿಲ್ಲ. ಸರ್ಕಾರ ಭತ್ತಕ್ಕೆ 3000 ರೂ. ಬೆಂಬಲ ಬೆಲೆ ನಿಗದಿ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ಹೇಮಂತ್ ರೈತ, ಕಡದಕಟ್ಟೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net