

ಬೆಟ್ಟದಪುರ: ತಾಲೂಕಿನ ಗಡಿ ಗ್ರಾಮವಾದ ಚಾಮರಾಯನಕೋಟೆ ಬಳಿ ಕಾವೇರಿ ನದಿಯ ಮಧ್ಯೆಭಾಗದಲ್ಲಿರುವ ಶ್ರೀಹೊಳೆ ಹನುಮಂತರಾಯ ಗುಡಿಗೆ ಬರುವ ಭಕ್ತರಿಗೆ ಭೋಜನಾಲಯ ನಿರ್ಮಾಣದಿಂದ ಅನುಕೂಲಕರವಾಗಲಿದೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ಚಾಮರಾಯನಕೋಟೆ ಗ್ರಾಮದಲ್ಲಿ ಸೋಮವಾರ ಸಂಜೆ ಹೊಳೆ ಹನುಮಂತರಾಯ ದೇವಸ್ಥಾನದ ಭೋಜನಾಲಯ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಈ ಸ್ಥಳವು ಐತಿಹಾಸಿಕ ಹಿನ್ನೆಲೆ ಇರುವ ಮಾರುತಿಯ ಪುಣ್ಯಕ್ಷೇತ್ರವಾಗಿದೆ. ಇಲ್ಲಿ ನಡೆಯುವ ಶುಭ ಕಾರ್ಯದಲ್ಲಿ ಭಕ್ತಾದಿಗಳು ಅಡುಗೆ ಹಾಗೂ ಊಟ ಮಾಡುವುದಕ್ಕೆ ಸರಿಯಾದ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯಾಗಿತ್ತು. ಇದನ್ನು ಸ್ಥಳೀಯರು ನನ್ನ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಅನುದಾನ ನೀಡಿದ್ದೇನೆ. ಶೀಘ್ರವೇ ಕೆಲಸ ಆರಂಭಿಸಿ ಬೇಗ ಭೋಜನಾಲಯ ನಿರ್ಮಾಣ ಮಾಡಬೇಕು. ಕಟ್ಟಡದ ಉದ್ಘಾಟನೆಯನ್ನೂ ನಾನೇ ಮಾಡಬೇಕು ಎಂದರು.
ಹೊಳೆಯಂಚಿನ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಹಲವು ಕೆಲಸಗಳನ್ನು ಮಾಡಿಸಿದ್ದೇನೆ. 30 ವರ್ಷಗಳಿಂದ ಅಭಿವೃದ್ಧಿ ಕಾಣದೆ ಇದ್ದ ಗ್ರಾಮಗಳು ಇಂದಿನ ದಿನಗಳಲ್ಲಿ ಉತ್ತಮ ರಸ್ತೆ, ಚರಂಡಿ ಹಾಗೂ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಹೊಂದಿವೆ ಎಂದರು.
ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ದೊಡ್ಡಕಮರಹಳ್ಳಿ ಗ್ರಾ.ಪಂ ಅಧ್ಯಕ್ಷ ಚಂದ್ರೇಗೌಡ, ಮುಖಂಡರಾದ ಹರೀಶ್, ಕುಮಾರ್, ಪುಟ್ಟರಾಜು, ಕೆಂಪಯ್ಯ, ವೆಂಕಟೇಶ್, ಗಿರೀಶ್, ಇಂದ್ರೇಶ್, ಅಶೋಕ್, ಪುಟ್ಟಸ್ವಾಮಿ, ಸತೀಶ್, ಕಂದಾಯ ನಿರೀಕ್ಷಕ ಎನ್.ಕೆ ಪ್ರದೀಪ್, ಪಿಡಿಒ ಶಿಲ್ಪಶ್ರೀ, ಇಂಜಿನಿಯರ್‌ಗಳಾದ ಪ್ರಭು, ಹಿತೇಂದ್ರ ಇದ್ದರು.