

ಸ್ವಾತಂತ್ರ್ಯ ಹೋರಾಟದಲ್ಲಿ ಪುರುಷರಷ್ಟೇ ಮಹತ್ವದ ಪಾತ್ರವನ್ನು ಮಹಿಳೆಯರೂ ವಹಿಸಿರುವುದು ಚರಿತ್ರಾರ್ಹವಾದ ಸಂಗತಿ. ಅಸಹಕಾರ ಆಂದೋಲನ, ಕರನಿರಾಕರಣ, ಉಪ್ಪಿನ ಸತ್ಯಾಗ್ರಹ, ಸ್ವದೇಶಿ ಚಳವಳಿ ಮುಂತಾದ ಕ್ರಾಂತಿಕಾರಿಕ ಹೋರಾಟಗಳಲ್ಲಿ ಕರ್ನಾಟಕದ ಸಾವಿರಾರು ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಸಹನೆ ಮತ್ತು ಧೀಮಂತ ಶಕ್ತಿಯಿಂದ ಹೋರಾಟ ಮಾಡಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಇತಿಹಾಸ ಸೃಷ್ಟಿಸಿದ್ದಾರೆ.
ಸ್ವಾತಂತ್ರ್ಯ ಚಳವಳಿ ಮನೆ ಒಳಗೂ-ಹೊರಗೂ ಹಬ್ಬಿ ಹರಡಿದ ವೇಳೆಯಲ್ಲಿ ಮಹಿಳೆಯರು ಅಡುಗೆ ಮನೆಯ ಸೆರೆ ತೊರೆದು, ಸೆರೆಮನೆಯ ಕಠಿಣ ಶಿಕ್ಷೆಯ ವಾಸವನ್ನು ಮನಃಪೂರ್ವಕವಾಗಿ ಅನುಭವಿಸಿದರು. ಬ್ರಿಟಿಷರಿಗೆ ಆಶ್ಚರ್ಯವಾಗುವ ರೀತಿಯಲ್ಲಿ ನಮ್ಮ ಕರ್ನಾಟಕದ ಮಹಿಳೆಯರು ವೀರವನಿತೆಯರಾಗಿ ಹೊರ ಹೊಮ್ಮಿದರು. ಚಳವಳಿಗೆ ಪೂರಕವಾಗಿ ರಾಜ್ಯಾದ್ಯಂತ ಮಹಿಳಾ ಸಂಘ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು. ಅವುಗಳಲ್ಲಿ ಪ್ರಮುಖವಾಗಿ ಕುಮಟಾ ಮಂಗಳೂರು ಮಹಿಳಾ ಸಭಾ, ಗದಗ ಮಹಿಳಾ ಸಮಿತಿ, ಹುಬ್ಬಳ್ಳಿಯ ಭಗಿನಿ ಮಂಡಳ, ಹಾನಗಲ್ ರಾಷ್ಟ್ರೀಯ ಕನ್ಯಾಶಾಲೆ, ಧಾರವಾಡದ ಮಹಿಳಾ ಸಮಾಜ, ಹಾವೇರಿಯ ಭಗಿನಿ ಸಮಾಜ ಮತ್ತು ಮೈಸೂರಿನ ಭಗಿನಿ ಸೇವಾ ಸಮಾಜ ಮುಂತಾದ ಸಂಸ್ಥೆಗಳು ಮಹಿಳೆಯರಿಗೆ ನಾಯಕತ್ವ, ದೇಶಪ್ರೇಮದ ಮಾರ್ಗದರ್ಶನ ನೀಡುವ ಸಂಘಗಳಾಗಿ ಮಾರ್ಪಟ್ಟವು.
ಮಹಿಳಾ ಪ್ರಮುಖರು ಸ್ವರಾಜ್ಯ ಬೇಡಿಕೆ ಚಳವಳಿಯಲ್ಲಿಯೂ ಮುಂಚೂಣಿ ಯಲ್ಲಿದ್ದರು. ಅಂದಿನ ಮಹಿಳೆಯರು ಪುರುಷರಿಗಿಂತಲೂ ಕ್ರಿಯಾಶೀಲರಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎಂದರೆ ಅತಿಶಯೋಕ್ತಿಯಾಗಲಾರದು. ಅನಿಬೆಸೆಂಟ್, ಬಾಲಗಂಗಾಧರ ತಿಲಕ್ ಮುಂತಾದವರು ದೇಶದ ಸ್ವಆಡಳಿತಕ್ಕಾಗಿ ಹಾಗೂ ಮಹಿಳಾ ಹೋರಾಟಗಾರ್ತಿ ಯರಿಗೆ ಸ್ಪೂರ್ತಿ ನೀಡಲು ಸಕ್ರಿಯರಾಗಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರು ವಹಿಸಿದ ನಾಯಕತ್ವ, ಮುನ್ನಡೆಸಿದ ಚಳವಳಿಗಳು ಇಂದಿಗೂ ಯುವ ಪೀಳಿಗೆಗೆ ಮಾದರಿಯಾಗಿವೆ. ಬೆಂಗಳೂರು, ಮೈಸೂರು, ಧಾರವಾಡ, ಗದಗ ಮುಂತಾದ ಕಡೆ ವಿದೇಶಿ ಪದಾರ್ಥಗಳ ಬಹಿಷ್ಕಾರ ಚಳವಳಿಗೆ ಪೂರಕವಾಗಿ ಕರಪತ್ರ ಸಿದ್ಧಪಡಿಸಿ ಕರ್ನಾಟಕದಾದ್ಯಂತ ಮಹಿಳೆಯರನ್ನು ಜಾಗೃತಿಗೊಳಿಸಲಾಯಿತು.
ಈ ಸ್ವದೇಶಿ ಚಳವಳಿಯ ಸಂದರ್ಭದಲ್ಲಿ ಬೆಂಗಳೂರು ದಂಡಿನ ಭಾಗದಿಂದ 187ಕ್ಕಿಂತಲೂ ಹೆಚ್ಚಿನ ಸತ್ಯಾಗ್ರಹಿಗಳು ಜೈಲು ಸೇರಿದರು. ಸರ್ದಾರ್ ವೆಂಕಟರಾಮಯ್ಯನವರ ಪತ್ನಿ ಗೌರಮ್ಮನವರು ಶಿವಮೊಗ್ಗ ಜಿಲ್ಲೆಯಲ್ಲಿ ಸ್ವದೇಶಿ ಚಳವಳಿ ಕುರಿತು ಭಾಷಣ ಮಾಡಿ ಅಪಾರ ಮಹಿಳೆಯರನ್ನು ಸಂಘಟಿಸಿದರು. ಕಾವೇರಮ್ಮ, ಲಕ್ಷ್ಮಮ್ಮ ಇವರ ಸಹಕಾರದಿಂದ ಶಿವಮೊಗ್ಗ ಜಿಲ್ಲೆಯ ಹೆಜ್ಜೆ ಎಂಬ ಊರಿನಲ್ಲಿ ಮೊದಲ ಬಾರಿಗೆ ಮಹಿಳಾ ಸತ್ಯಾಗ್ರಹ ಪ್ರಾರಂಭಿಸಿದರು.
ಅಂದಿನ ಸರ್ಕಾರದವರು ಮುಟ್ಟುಗೋಲು ಹಾಕಿಕೊಂಡಿದ್ದ ಒಂದು ಎಮ್ಮೆ ಹಾಗೂ ಕೆಲವು ಒಡವೆಗಳನ್ನು ಪಟೇಲ್ ರಾಮಪ್ಪ ಎಂಬುವವರು ಹರಾಜಿನಲ್ಲಿ ಕೊಂಡುಕೊಂಡಿದ್ದರು. ಆ ಊರಿನ ಜನ ಪಟೇಲ್ ರಾಮಪ್ಪರ ಈ ಕೆಲಸವನ್ನು ವಿರೋಧಿಸಿದ್ದರು. ಗ್ರಾಮದ ಜನರ ಅಭಿಪ್ರಾಯಕ್ಕೆ ಸಹಮತಿಸಿದ ಗೌರಮ್ಮನವರು ಕಾವೇರಮ್ಮ ಮತ್ತು ಲಕ್ಷ್ಮಮ್ಮ ಇವರೊಡಗೂಡಿ ರಾಮಪ್ಪನವರ ಮನೆಯ ಮುಂದೆ ಸತ್ಯಾಗ್ರಹ ಹೂಡಿದರು. ಹರಾಜಿನಲ್ಲಿ ಕೊಂಡಿರುವುದನ್ನು ಹಿಂದಿರುಗಿಸುವವರೆಗೂ ನಿರಶನವ್ರತ ಕೈಗೊಳ್ಳುವುದಾಗಿ ಘೊಷಿಸಿದರು. ಆ ಸಮಯಕ್ಕೆ ವೆಂಕಟರಾಮಯ್ಯನವರೂ ಅಲ್ಲಿಗೆ ಬಂದಿದ್ದರು. ಆದರೆ, ಅವರ ಮೇಲೆ ಪೊಲೀಸ್ ವಾರೆಂಟ್ ಇದ್ದುದ್ದರಿಂದ ಅವರು ಅಲ್ಲಿ ಕೂಡಲೇ ಕಾಣಿಸಿಕೊಳ್ಳಲಿಲ್ಲ. ಪಟೇಲ್ ರಾಮಪ್ಪನ ಹೆಂಡತಿಗೆ ತನ್ನ ಮನೆಯ ಮುಂದೆ ಹೆಣ್ಣುಮಕ್ಕಳು ಉಪವಾಸ ಕೂಡುವುದು ಸರಿ ಕಾಣಲಿಲ್ಲ. ಆಕೆ ಗಂಡನನ್ನು ಕಾಡಿ-ಬೇಡಿ ಮನ ಒಲಿಸಿದಳು. ಪರಿಣಾಮವಾಗಿ ರಾಮಪ್ಪ ಹಠಮಾರಿತನ ತೊರೆದು ಎಮ್ಮೆ ಮತ್ತು ಒಡವೆಗಳನ್ನು ಅದರ ಮಾಲೀಕನಿಗೆ ವಾಪಸು ಕೊಟ್ಟರು. ಅಲ್ಲದೆ, ಸತ್ಯಾಗ್ರಹಿಗಳು ಅವರ ಮನೆಯಲ್ಲಿ ಅತಿಥಿಗಳಾಗಿದ್ದು, ಅವರಲ್ಲೂ ದೇಶಪ್ರೇಮದ ಅರಿವನ್ನು ಮೂಡಿಸುವಲ್ಲಿ ಸಫಲರಾದರು. ಹೆಣ್ಣು ಮಕ್ಕಳ ಈ ಯಶಸ್ವಿ ಸತ್ಯಾಗ್ರಹದ ವಾರ್ತೆ ಕಾಳ್ಗಿಚ್ಚಿನಂತೆ ಹಬ್ಬಿತು. ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕರನಿರಾಕರಣ ಚಳವಳಿಗೂ ಇದು ಚೇತನ ತುಂಬಿದ ವಿಚಾರ ದಾಖಲೆಗಳಲ್ಲಿ ಕಂಡುಬರುತ್ತವೆ. ಕ್ವಿಟ್ ಇಂಡಿಯಾ ಚಳವಳಿಯ ಪ್ರಾರಂಭದ ಸಮಯದಲ್ಲಿ, ಬ್ರಿಟಿಷರು ಎಲ್ಲ ಪ್ರಮುಖ ಕಾಂಗ್ರೆಸ್ ಮುಖಂಡರನ್ನು ಮೊದಲೇ ಬಂಧನದಲ್ಲಿರಿಸಿದ್ದರು. ಇದರಿಂದ ಕೇಡರ್ ತಲೆಮರೆಸಿಕೊಳ್ಳಬೇಕಾಯಿತು. ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಂವಹನ ಸ್ಥಾಪಿಸುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಿದರು. ಉದಾ: ಉಷಾ ಮೆಹ್ತಾ ಕಾಂಗ್ರೆಸ್ ರೇಡಿಯೋವನ್ನು ನಡೆಸಿದರು. ಇದು ಭೂಗತ ರೇಡಿಯೋ ಕೇಂದ್ರವಾಗಿದ್ದು, ಕ್ವಿಟ್ ಇಂಡಿಯಾ ಚಳವಳಿಯ ಸಮಯದಲ್ಲಿ ಸ್ವಲ್ಪ ಸಮಯದವರೆಗೆ ಕಾರ್ಯನಿರ್ವಹಿಸಿತು. ಮಹಿಳೆಯರು ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸದಿದ್ದರೆ ಗಾಂಧೀಜಿಯವರ ಜನಾಂದೋಲನ ಯಶಸ್ವಿಯಾಗುತ್ತಿರಲಿಲ್ಲ. ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿದ್ದರಿಂದ ಅಸಹಕಾರ ಆಂದೋಲನ ಮತ್ತು ಕ್ವಿಟ್ ಇಂಡಿಯಾದಂತಹ ಚಳವಳಿಗಳು ಯಶಸ್ವಿಯಾದವು. ಉದಾ: ಸರೋಜಿನಿ ನಾಯ್ಡು ಅವರು ದಾರಾಸನ ಸಾಲ್ಟ್ಸ್ ಸತ್ಯಾಗ್ರಹದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅದೇ ರೀತಿ ಮಹಿಳಾ ಗ್ರಾಮಸ್ಥರ ಭಾಗವಹಿಸುವಿಕೆಯಿಂದ ಖೇಡಾ ಸತ್ಯಾಗ್ರಹ ಯಶಸ್ವಿಯಾಯಿತು.
ಭಾರತೀಯ ಸ್ವಾತಂತ್ರ್ಯ ಆಂದೋಲನದಲ್ಲಿ ಮಹಿಳೆಯರು ವಹಿಸಿದ ಪಾತ್ರ, ನಡೆ, ನುಡಿಗಳು ಪ್ರಾತಃಸ್ಮರಣೀಯವಾದವು. ಅಖಿಲ ಭಾರತ ಕಾಂಗ್ರೆಸ್ ಸ್ವಾತಂತ್ರ್ಯಕ್ಕಾಗಿನ ಹೋರಾಟವನ್ನು ಬಲಗೊಳಿಸುತ್ತಾ ಬಂದಂತೆ, ಮೈಸೂರು ಸಂಸ್ಥಾನ ತಾನೂ ಈ ಕಣಕ್ಕಿಳಿಯಲು ಹಂಬಲಿಸುತ್ತಿತ್ತು. ಬೇರೆ ಯಾವ ಆಶ್ರಿತ ಸಂಸ್ಥಾನಗಳೂ ರಾಷ್ಟ್ರ ಸ್ವಾತಂತ್ರ್ಯಕ್ಕೆ ಸಂಘಟನೆ ಮಾಡಿಕೊಳ್ಳುವ ಮೊದಲು ಮೈಸೂರು ಜಾಗೃತಗೊಂಡು ಉಳಿದ ಆಶ್ರಿತ ಸಂಸ್ಥಾನಗಳಿಗೆ ಮಾರ್ಗದರ್ಶಿಯಾಯಿತು.
ಬ್ರಿಟಿಷ್ ಸರ್ಕಾರ ತನ್ನ ರೆಸಿಡೆಂಟರುಗಳ ಮೂಲಕ ಆಶ್ರಿತ ಸಂಸ್ಥಾನಗಳಲ್ಲಿ ರಾಷ್ಟ್ರೀಯ ಭಾವನೆ ಹರಡುವುದನ್ನು ತಡೆಗಟ್ಟಲು ಭಾರಿ ಪ್ರಯತ್ನ ಮಾಡಿದಾಗ್ಯೂ ಮೈಸೂರು ಸಂಸ್ಥಾನದ ವಿದ್ಯಾವಂತರು, ವಿಚಾರವಂತರು ಬ್ರಿಟಿಷ್ ಭಾರತದಲ್ಲಿ ನಡೆಯುತ್ತಿದ್ದ ವಿದ್ಯಮಾನ ಗಮನಿಸದೆ ಬಿಡುತ್ತಿರಲಿಲ್ಲ. ಮೈಸೂರು ಸಂಸ್ಥಾನದ ಜನತೆಯು ರಾಷ್ಟ್ರೀಯ ಸಮಸ್ಯೆ ಅರ್ಥ ಮಾಡಿಕೊಳ್ಳುವಲ್ಲಿಯೂ, ಶಾಸನಸಭೆಗೆ ಹೆಚ್ಚಿನ ಅಧಿಕಾರ ದೊರಕಿಸಿಕೊಡುವುದರಲ್ಲೂ ಮುಂದಾಗಿ, ದಿವಾನರ ಅಧಿಕಾರ ಮೊಟಕುಗೊಳಿಸುವ ಚಳವಳಿಯನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಮೈಸೂರು ಸಂಸ್ಥಾನದ ಮಹಿಳೆಯರು ಸಂಗ್ರಾಮಕ್ಕೆ ಸ್ಪಂದಿಸಿರುವುದು ಕಂಡುಬರುತ್ತದೆ. ಹಾಗೆಯೇ ಇದಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ನೂರಾರು ಜನ ವೀರಮಹಿಳೆಯರ ಚಿತ್ರಣವು ಇಂದಿಗೂ ನಮ್ಮನ್ನು ಜಾಗೃತಗೊಳಿಸುವಲ್ಲಿ ಯಶಸ್ವಿಯಾಗಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಗೋಚರವಾದ ಸ್ತ್ರೀಶಕ್ತಿಯ ಸಬಲೀಕರಣ ಮತ್ತು ಅಭಿವ್ಯಕ್ತಿ ವಿಶ್ವದ ಸ್ವಾತಂತ್ರ್ಯ ಇತಿಹಾಸದಲ್ಲೇ ಮಹತ್ವ ಪಡೆದುಕೊಂಡಿದೆ. ಪ್ರಬುದ್ಧರಿಂದ ಹಿಡಿದು ಅವಿದ್ಯಾವಂತರವರೆಗೆ ಲಕ್ಷೋಪಲಕ್ಷ ಮಹಿಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ಸಮರ್ಪಿಸಿಕೊಂಡಿದ್ದಾರೆ. ಪ್ರತಿಭೆ, ಸಂಪತ್ತು, ಸಮಯ, ವಿದ್ಯೆಯನ್ನು ದೇಶದ ವಿಮೋಚನೆಯ ಹೋರಾಟಕ್ಕೆ ಧಾರೆಯೆರೆದ ನಾಯಕಿಯರ ಸಂಖ್ಯೆ ಅಪಾರ. ಬದಲಾಗುತ್ತಿರುವ ಸಮಾಜ, ಸಾಂಸ್ಕೃತಿಕ, ಆರ್ಥಿಕ ರಂಗಗಳಲ್ಲಿ ಮಹಿಳೆಯರನ್ನು ಸಜ್ಜುಗೊಳಿಸುವ ಕಾರ್ಯದಲ್ಲಿ ಈ ಮಹಿಳಾ ಚಳವಳಿಗಳು ಮಹತ್ತರವಾದ ಪಾತ್ರ ವಹಿಸಿವೆ.
ಬೆಳಗಾವಿಯ ಕಾಕತಿಯ ಕಿತ್ತೂರು ಚನ್ನಮ್ಮ, ಉಮಾಬಾಯಿ ಕುಂದಾಪುರ, ಬೆಂಗಳೂರಿನ ಯಶೋದರಮ್ಮ ದಾಸಪ್ಪ, ಹೊನ್ನಾವರದ ಕೃಷ್ಣಬಾಯಿ ಪಂಜಿಕರ್, ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸಹೋದರಿ ದೊಡ್ಮನೆ ಮಹಾದೇವಿ ಹೆಗಡೆ, ಬಳ್ಳಾರಿ ಸಿದ್ದಮ್ಮ, ಹರಿಹರ ತಾಲೂಕಿನ ಟಿ.ಬಿ.ಜಯಲಕ್ಷ್ಮೀ ಮುಂತಾದ ಸಾವಿರಾರು ಧೀಮಂತ ಮಹಿಳೆಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಬ್ರಿಟಿಷರಿಗೆ ಸಿಂಹಸ್ವಪ್ನವಾದರು.
(ಲೇಖಕರು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಭವನದ ವಿಶ್ರಾಂತ ನಿರ್ದೇಶಕರು)