

ಮೂಡಿಗೆರೆ: ರಾಜ್ಯದಲ್ಲಿ 30 ಲಕ್ಷ ಬ್ಯಾರಿ ಭಾಷಿಕರಿದ್ದು ಈ ಸಮುದಾಯಕ್ಕೆ ರಾಜ್ಯ ಸರ್ಕಾರ ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಎಂದು ಜಿಲ್ಲಾ ಬ್ಯಾರಿ ಒಕ್ಕೂಟದ ಉಪಾಧ್ಯಕ್ಷ ಎಚ್.ಯು.ಫಾರೂಕ್ ಒತ್ತಾಯಿಸಿದರು.
ಮಂಗಳವಾರ ಬಿದರಹಳ್ಳಿ ಕ್ಯಾಪ್ರಿ ರೆಸಾರ್ಟ್‌ನಲ್ಲಿ ಜಿಲ್ಲಾ ಬ್ಯಾರಿ ಒಕ್ಕೂಟ ಮತ್ತು ಮಲೆನಾಡು ಗಲ್ಫ್ ಎಜುಕೇಷನ್ ಟ್ರಸ್ಟ್‌ನಿಂದ ಏರ್ಪಡಿಸಿದ್ದ ಬ್ಯಾರಿ ಫ್ಯಾಮಿಲಿ ಸಂಗಮ ಕಾರ್ಯಕ್ರಮದಲ್ಲಿ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ ಮತ್ತು ವಿದೇಶದಲ್ಲಿ ನೆಲೆಸಿರುವ ಬ್ಯಾರಿ ಭಾಷಿಕರಿಗೆ ಸರ್ಕಾರದಿಂದ ಯಾವುದೆ ಸವಲತ್ತು ದೊರಕುತ್ತಿಲ್ಲ. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ ಹಲವಾರು ಸಮುದಾಯಗಳು ಸೇರ್ಪಡೆಯಾಗುವುದರಿಂದ ಇದರಲ್ಲಿ ಬ್ಯಾರಿ ಪಂಗಡಕ್ಕೆ ಲಾಭವಿಲ್ಲ. ಅಲ್ಪಸಂಖ್ಯಾತ ನಿಗಮದಿಂದ ಸವಲತ್ತು ಪಡೆಯಲು ಬ್ಯಾರಿ ಪಂಗಡಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಸರ್ಕಾರ ಬ್ಯಾರಿ ಪಂಗಡಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಮತ್ತು ವಿವಿಧ ತಾಲೂಕಿನ ಬ್ಯಾರಿ ಒಕ್ಕೂಟ, ಮಲೆನಾಡು ಗಲ್ಫ್ ಎಜುಕೇಷನ್ ಟ್ರಸ್ಟ್ ಕುಟುಂಬಗಳು ಪರಿಚಯ ಮಾಡಿಕೊಂಡವು. ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಬ್ಯಾರಿ ಒಕ್ಕೂಟದ ಅಧ್ಯಕ್ಷ ಟಿ.ಎಂ.ನಾಸಿರ್, ಕೆ.ಮಹಮ್ಮದ್, ಕಿರುಗುಂದ ಅಬ್ಬಾಸ್, ಬಿ.ಎಸ್.ಮೊಹಮ್ಮದ್, ಅಕ್ರಮ್ ಹಾಜಿ, ಬಿ.ಎಚ್.ಮಹಮ್ಮದ್, ಸಿ.ಕೆ.ಇಬ್ರಾಹಿಂ, ಮೊಯ್ದಿನ್, ಪಿ.ಕೆ.ಹಮೀದ್, ಬಿ.ಎ.ಉಮರ್, ಇಬ್ರಾಹಿಂ ಆಲ್ದೂರು, ಪಿ.ಕೆ.ಹನಿಫ್, ಖಲಂದರ್ ಹಾಂದಿ, ಫಾರೂಕ್ ಬಣಕಲ್, ಇಬ್ರಾಹಿಂ ಶಾಲಿಮಾರ್, ಉಮರಬ್ಬ ಇತರರಿದ್ದರು.