ಬೆಳೆ ಕಳೆದುಕೊಂಡು ರೈತ ಕಂಗಾಲು

22sor3 rain
ಸೊರಬ ತಾಲೂಕಿನ ಯಲಿವಾಳ ಗ್ರಾಮದ ಕಮಲಮ್ಮ ಗುಡಗದ್ದಿ ಅವರ ಮನೆಗೆ ಮಳೆ ನೀರು ನುಗ್ಗಿರುವುದು.
Published on

ಸೊರಬ: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಎಡೆಬಿಡದೆ ಸುರಿಯುತ್ತಿದ್ದ ಮಳೆ ಮಂಗಳವಾರ ಕೊಂಚ ಬಿಡುವು ನೀಡಿದೆ. ಸೋಮವಾರ ಸುರಿದ ಮಳೆ ಹಲವೆಡೆ ಅವಾಂತರ ಸೃಷ್ಟಿಸಿದೆ.

ಹಳ್ಳ, ಕೊಳ್ಳಗಳು ಉಕ್ಕಿ ಹರಿದ ಪರಿಣಾಮ ರಸ್ತೆಯ ಮೇಲೆ ನೀರು ಹೊಳೆಯಂತೆ ಹರಿಯಿತು. ಧಾರಾಕಾರ ಮಳೆಯಿಂದಾಗಿ ಆನವಟ್ಟಿ ಹೋಬಳಿಯ ಯಲಿವಾಳ ಗ್ರಾಮದ ನಾಗರಹಳ್ಳ ಸೇತುವೆ ಮೇಲೆ ನೀರು ಉಕ್ಕಿ ಹರಿದು ಆರು ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ನಿವಾಸಿಗಳು ಮತ್ತು ಗ್ರಾಮಸ್ಥರು ರಾತ್ರಿಯೆಲ್ಲ ಪರದಾಡುವಂತಾಯಿತು. ಮನೆಯಲ್ಲಿ ಸಂಗ್ರಹವಾದ ನೀರನ್ನು ಪಂಪ್‌ಸೆಂಟ್ ಮೂಲಕ ಹೊರಹಾಕಿದರು. ಮಣ್ಣಿನ ಮನೆಗಳಲ್ಲಿ ವಾಸವಿದ್ದವರು ಗೋಡೆ ಕುಸಿಯುವ ಆತಂಕದಲ್ಲಿದ್ದಾರೆ.

ತಾಲೂಕಿನ ಗಡಿಭಾಗ ಯಲಿವಾಳ ಮತ್ತು ಹಳ್ಳದ ಬೆಣ್ಣಿಗೆರೆ ನಡುವೆ ಹಳ್ಳ ಉಕ್ಕಿ ಹರಿದಿದ್ದು ನೂರಾರು ಎಕರೆ ಜಮೀನು ಜಲಾವೃತವಾಗಿದೆ. ರಸ್ತೆಗಳಲ್ಲಿ ನೀರು ಹರಿದಿದ್ದರಿಂದ ವಾಹನಗಳ ಸಂಚಾರಕ್ಕೂ ತೊಡಕಾಗಿತ್ತು. ಮತ್ತೊಂದೆಡೆ ವಿದ್ಯುತ್ ಸರಬರಾಜಿನಲ್ಲೂ ವ್ಯತ್ಯಯವಾಗಿತ್ತು. ಕಟಾವಿಗೆ ಬಂದ ಭತ್ತದ ಬೆಳೆ ನೆಲಕಚ್ಚಿದ್ದು ರೈತ ಸಮೂಹ ಕಂಗಾಲಾಗಿದೆ.

ಶಿಕಾರಿಪುರ ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಶಿರಾಳಕೊಪ್ಪ-ಸೊರಬ ರಸ್ತೆಯ ಛತ್ರದಹಳ್ಳಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆ ಕೋಡಿಯ ನಾಲೆಗೆ ಜಾರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net