ಬೆಲೆ ಕುಸಿತದಿಂದ ಈರುಳ್ಳಿ ಬೆಳೆಗಾರರಿಗೆ ಸಂಕಷ್ಟ

14kdr3 onion
ಸೂಕ್ತ ದರವಿಲ್ಲದ ಕಾರಣ ಈರುಳ್ಳಿಯನ್ನು ಚೀಲಗಳಲ್ಲಿ ತುಂಬಿಟ್ಟಿರುವುದು.
Published on

ಕಡೂರು: ಪ್ರಸಕ್ತ ಬಾರಿಯ ಮುಂಗಾರಿನಲ್ಲಿ ಈರುಳ್ಳಿ ಇಳುವರಿ ಉತ್ತಮವಾಗಿ ಬಂದಿದ್ದರೂ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ಈರುಳ್ಳಿ ಬೆಳೆದಿರುವ ರೈತರು ಸಲು ಕಿತ್ತು ಕಾಪಾಡುವಲ್ಲಿ ಪರದಾಡುವಂತಾಗಿದೆ. ಅಲ್ಲದೆ ತಾಲೂಕಿನಲ್ಲಿ ಅಲ್ಲಲ್ಲಿ ಮಳೆ ಕೊರತೆ ಪರಿಣಾಮ ಈರುಳ್ಳಿ ಗಡ್ಡೆಯ ಗಾತ್ರವೂ ಹಿಗ್ಗದೆ ಮಧ್ಯಮ ಗಾತ್ರದಲ್ಲಿಯೇ ಕೊಯ್ಯುವ ಪರಿಸ್ಥಿತಿ ಎದುರಾಗಿದೆ.

ತಾಲೂಕಿನಲ್ಲಿ 2724 ಹೆಕ್ಟೇರ್‌ನಷ್ಟು ಬಿತ್ತನೆಯಾಗಿರುವ ಈರುಳ್ಳಿ ಕಳೆದ ಬಾರಿಯ ಮಾರುಕಟ್ಟೆಯ ಉತ್ಸಾಹ ಈ ಬಾರಿ ಇಲ್ಲದಾಗಿದೆ. ಈರುಳ್ಳಿ ಬೆಳೆಯುವುದಕ್ಕಾಗಿ ಕಸಬಾ ಮತ್ತು ಹಿರೇನಲ್ಲೂರು, ಚೌಳಹಿರಿಯೂರು ಹೋಬಳಿ ಭಾಗದ ಬಹುತೇಕ ರೈತರು ಸಾಕಷ್ಟು ಹಣ ಖರ್ಚು ಮಾಡಿದ್ದು, ಹಾಕಿದ ಬಂಡವಾಳವೂ ಕೈಗೆ ಸಿಗದಂಥ ಪರಿಸ್ಥಿತಿಗೆ ಬೆಲೆ ಕುಸಿತ ಕಾರಣವಾಗಿದೆ.

ಮುಂಗಾರಿನ ಬೆಳೆಗಾಗಿ ಈರುಳ್ಳಿ ಬಿತ್ತನೆ ಮಾಡಿದ್ದ ರೈತರು ಬೀಜ, ಗೊಬ್ಬರ, ಕೂಲಿಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಉತ್ತಮ ಇಳುವರಿ ಬಂದಿರುವ ಪರಿಣಾಮ ಈರುಳ್ಳಿ ಕಿತ್ತು ಕೊಯ್ಲು ಮಾಡಿ ಚೀಲಕ್ಕೆ ತುಂಬಿ ಮಾರಾಟ ಮಾಡುವ ಸಂದರ್ಭದಲ್ಲೇ ಬೆಲೆ ಕುಸಿತದ ಬರ ಸಿಡಿಲು ಅಪ್ಪಳಿಸಿದೆ. ಅಲ್ಲದೆ ಈರುಳ್ಳಿಯನ್ನು ಕಾಪಾಡುವುದರಲ್ಲೇ ಹಣ ಕಳೆದುಕೊಳ್ಳುವುದರ ಜತೆಗೆ ಈರುಳ್ಳಿಯ ತೂಕ ದಿನದಿಂದ ದಿನಕ್ಕೆ ಇಳಕೆಯಾಗುತ್ತಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಮಹಾರಾಷ್ಟ್ರ ಭಾಗದ ಹಳೆಯ ಈರುಳ್ಳಿಗೆ ಅಧಿಕ ದರ ಇದ್ದರೆ, ರಾಜ್ಯದ ಈರುಳ್ಳಿಗೆ ಬೆಲೆ ಕುಸಿತದ ಹೊಡೆತ ತಟ್ಟಿದೆ. ಮಹಾರಾಷ್ಟ್ರದ ಈರುಳ್ಳಿಗೆ ಕ್ವಿಂಟಾಲ್‌ಗೆ 1200ರಿಂದ 1700 ರೂ.ವರೆಗೆ ಖರೀದಿಸುತ್ತಿದ್ದರೂ ರಾಜ್ಯದ ಈರುಳ್ಳಿಯನ್ನು ಕ್ವಿಂಟಾಲ್‌ಗೆ 500 ರೂ.ಗೆ ವ್ಯಾಪಾರಸ್ಥರು ಕೇಳುತ್ತಿರುವುದು ಬೆಳೆಗಾರರನ್ನು ಹೈರಾಣಾಗಿಸಿದೆ. ಎಕರೆಗೆ ಬೀಜ, ಗೊಬ್ಬರ, ಕೂಲಿ ಆಳುಗಳು ಸೇರಿ 35 ಸಾವಿರದಿಂದ-40 ಸಾವಿರದವರೆಗೆ ಖರ್ಚು ಮಾಡಿ ಬೆಳೆದಿರುವ ಈರುಳ್ಳಿಯ ಬೆಲೆ ಕುಸಿತವಾಗಿರುವ ಹಿನ್ನ್ನೆಲೆಯಲ್ಲಿ ಅವುಗಳನ್ನು ಪ್ಯಾಕೆಟ್ ಚೀಲಗಳಲ್ಲಿ ತುಂಬಿಸಿ ಉತ್ತಮ ದರ ಸಿಗಬಹುದೆಂದು ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net