ಬೃಹತ್ ರೈತ ಹಕ್ಕೊತ್ತಾಯ ಸಮಾವೇಶದಲ್ಲಿ ನಿರ್ಣಯ /ರೈತರ ಬೇಡಿಕೆಗಳು ಈಡೇರುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ / ಹೆಚ್. ಆರ್. ಬಸವರಾಜ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಜಿಲ್ಲೆಯಲ್ಲಿ ನೀರಿನ ಮತ್ತು ರೈತರ ಹಕ್ಕಿಗಾಗಿ ಹೋರಾಟ ಪ್ರಾರಂಭವಾಗಿದೆ. ನಮ್ಮ ಬೇಡಿಕೆಗಳು ಈಡೇರುವವರೆಗೆ ನಮ್ಮ ಹೋರಾಟ ನಿಲ್ಲಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜ್ ಕರೆ ನೀಡಿದರು.

ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಬೃಹತ್ ರೈತ ಹಕ್ಕೊತ್ತಾಯ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನೀರಾವರಿ ಯೋಜನೆಗಳಲ್ಲಿ ಯಾವುದೇ ತಾರತಮ್ಯವಿಲ್ಲದೆ ಬಯಲುಸೀಮೆಗೆ ಹರಿಯಬೇಕು. ಸರ್ಕಾರ ರೂಪಿಸುವ ನೀರಾವರಿ ಯೋಜನೆಗಳಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಆದರೆ ಯೋಜನೆಗಳು ನ್ಯಾಯಯುತವಾಗಿರಬೇಕು ಎಂದರು.

ಸರ್ಕಾರದ ನಿಷ್ಠಾವಂತರಿಗೆ ಲಾಭ ಹಾಗೂ ರಾಜಕಾರಣಿಗಳಿಗೆ ಲಾಭ ಮಾಡಿಕೊಡಲು ಕೇವಲ ಪೈಪ್ ಲೈನ್ ಹಾಕುವತ್ತ ಸರ್ಕಾರದ ಗಮನವೇ ಹೊರತು ನೀರು ಕೊಡುವ ಉದ್ದೇಶವೇ ಇಲ್ಲ ಎಂದು ಟೀಕಿಸಿದರು.

ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಯಾವ ಸರ್ಕಾರಗಳು ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿಲ್ಲ. ನಮ್ಮ ಹಕ್ಕು ಪಡೆಯುವ ಶಕ್ತಿ ನಮ್ಮ ಹೋರಾಟಗಳಿಗೆ ಮತ್ತು ಚಳುವಳಿಗಳಿಗೆ ಇದೆಯೆಂದರು.

ಕೃಷಿಕಾಯ್ದೆಗಳ ವಾಪಸಾತಿಗಾಗಿ ನಡೆದ ಚಳುವಳಿಗಳಲ್ಲಿ ನಾವು ಸಕ್ರಿಯರಾಗಿದ್ದೆವು ಅಂದು ನಡೆದ ಚಳುವಳಿಗಳಲ್ಲಿ ನಮ್ಮ ಪಾತ್ರವಿದೆ. ರಾಜ್ಯ ಸರ್ಕಾರ ಕೃಷಿ ಕಾಯ್ದೆಗಳನ್ನು ಶೀಘ್ರವಾಗಿ ವಾಪಸ್ಸು ಪಡೆಯಬೇಕು ಇಲ್ಲವಾದಲ್ಲಿ ಬುದ್ಧಿ ಕಲಿಸುವ ಮಾರ್ಗವು ನಮಗೆ ತಿಳಿದಿದೆಯೆಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಯಾವ ಸರ್ಕಾರಗಳೂ ಬಡವರನ್ನು ಮತ್ತು ರೈತರನ್ನು ಎದುರಾಕಿಕೊಂಡು ಹೋದರೆ ನಿಲ್ಲುವುದು ಅಸಾಧ್ಯ ಎಂದರಲ್ಲದೆ, ನಮ್ಮ ಸಮಸ್ಯೆಗಳ ಪಟ್ಟಿಯನ್ನು ಸರ್ಕಾರಕ್ಕೆ ನೀಡಿದ್ದೇವೆ, ಗಮನ ಹರಿಸಿ ಇತ್ಯರ್ಥ ಮಾಡದೆ ಹೋದಲ್ಲಿ ಬೃಹತ್ ಚಳುವಳಿ ನಡೆಸುವ ಬಗ್ಗೆ ಎಚ್ಚರಿಕೆ ನೀಡಿದರು.

ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ರೆಡ್ಡಿ ಮಾತನಾಡಿ, ಹಿಂದಿನ ಕಾಲದಲ್ಲಿ ಕೆರೆಗಳ ನಿರ್ಮಾಣವಾಯಿತು. ಅಂದು ಸಂಪದ್ಭರಿತ ವಾಗಿತ್ತು. ಆದರೆ ಈಗ ಕೆರೆಗಳು ಒತ್ತುವರಿಯಾಗಿ ಕೆರೆಗಳು ಮಾಯವಾಗುತ್ತಿದೆ. ಹೋರಾಟಗಳಿಂದ ಕೆ.ಸಿ.ವ್ಯಾಲಿ ಹರಿಯಿತು. ಆದರೆ ಮೂರನೇ ಹಂತದ ಶುದ್ಧೀಕರಣ ಮಾಡುತ್ತಿಲ್ಲ. ಇದರ ಪರಿಣಾಮ ಕೆರೆಗಳು ಕಲುಶಿತವಾಗುತ್ತಿದೆ. ಇದರಿಂದ ರೈತರು ರೋಗಗ್ರಸ್ತರಾಗುತ್ತಾರೆ. ಇನ್ನು ಹತ್ತು ವರುಷ ಇದೇ ನೀರು ಹರಿದರೆ ಭವಿಷ್ಯದಲ್ಲಿ ಪ್ರತಿ ಹಳ್ಳಿಗಳಿಗೂ ಕ್ಯಾನ್ಸರ್ ಆಸ್ಪತ್ರೆ ಮತ್ತು ಕಿಡ್ನಿ ಆಸ್ಪತ್ರೆಗಳು ಸ್ಥಾಪಿಸಬೇಕಾಗುತ್ತದೆ ಎಂದು ಟೀಕಿಸಿದರು.

ಜಿಲ್ಲಾಧಿಕಾರಿಗಳ ಪರವಾಗಿ ಆಗಮಿಸಿದ್ದ ತಹಶಿಲ್ದಾರ್ ಡಾ.ನಯನ ರವರಿಗೆ ರೈತರ ಹಕ್ಕೋತ್ತಾಯಗಳ ಮನವಿಯನ್ನು ಇದೇ ಸಂಧರ್ಭದಲ್ಲಿ ನೀಡಲಾಯಿತು.

ವೇದಿಕೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ, ರಾಜ್ಯ ಉಪಾಧ್ಯಕ್ಷ ಬೈಚೇಗೌಡ, ಜಿಲ್ಲಾ ಅಧ್ಯಕ್ಷ ಬೆಡಶೆಟ್ಟಹಳ್ಳಿ ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆನಂದಕುಮಾರ್, ಜಿಲ್ಲಾ ಕಾರ್ಯಾಧ್ಯಕ್ಷ ದಿನ್ನೆ ಹೊಸಹಳ್ಳಿ ರಮೇಶ್, ಹಿರಿಯ ರೈತ ಮುಖಂಡರುಗಳಾದ ಅಬ್ಬಣಿ ಶ್ರೀನಿವಾಸ್ ಮುಂತಾದವರಿದ್ದರು.

ಚಿತ್ರ ೨೫ ಕೆ.ಎಲ್.ಆರ್. ೦೯ : ಟಿ.ಚನ್ನಯ್ಯ ರಂಗಮAದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಬೃಹತ್ ರೈತ ಹಕ್ಕೊತ್ತಾಯ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜ್, ಜಿಲ್ಲಾ ಉಪಾಧ್ಯಕ್ಷ ಬೈಚೇಗೌಡ, ಪ್ರಧಾನಕಾರ್ಯದರ್ಶಿ ಕೆ.ಅನಂದಕುಮಾರ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net