

ನಂಜನಗೂಡು: ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿ ಬಾವುಟ ಕಟ್ಟಿ ಜನರಿಗೆ ಪಕ್ಷದ ಸಾಧನೆಗಳನ್ನು ತಿಳಿಸಿ ಬೂತ್ ಹಂತದಲ್ಲಿ ಪಕ್ಷವನ್ನು ಸಧೃಢಗೊಳಿಸಿ ಎಂದು ಶಾಸಕ ಬಿ.ಹರ್ಷವರ್ಧನ್ ಸಲಹೆ ನೀಡಿದರು.
ತಾಲೂಕಿನ ದೇವನೂರು ಗ್ರಾಮದಲ್ಲಿ ಬೂತ್ ವಿಜಯ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ಷೇತ್ರಕ್ಕೆ ಸುಮಾರು 700 ಕೋಟಿ ರೂ.ಗಿಂತಲೂ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಶ್ರೀಕಂಠೇಶ್ವರ ದೇವಾಲಯವನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಬೆಳ್ಳಿರಥ, 75 ಕೊಠಡಿಗಳ ಅಥಿತಿಗೃಹ ನಿರ್ಮಾಣ ಕಾಮಗಾರಿಯನ್ನು ನಡೆಸಲಾಗಿದೆ. ಅಲ್ಲದೆ ತಾಲೂಕಿನ ದಶಕಗಳ ಕಾಲದ ರೈತರ ಬೇಡಿಕೆಯಾಗಿದ್ದ ನುಗು ಏತ ನಿರಾವರಿ ಯೋಜನೆಗೆ 90 ಕೋಟಿ ರೂ.ವೆಚ್ಚದಲ್ಲಿ ಭೂಮಿಪೂಜೆ ನೆರವೇರಿಸಲಾಗಿದೆ. ಯಡಿಯಾಲ ಭಾಗದ ಕೆರೆ ತುಂಬಿಸುವ ಯೋಜನೆಯ ಕಾಮಗಾರಿ ಆರಂಭವಾಗಿದೆ. ಕೌಲಂದೆ ಭಾಗದ ಕೆರೆ ತುಂಬಿಸುವ ಯೋಜನೆಗಳಿಗೆ ಅನುದಾನ ಕೇಳಿದ್ದು ಶೀಘ್ರದಲ್ಲಿ ಬಿಡುಗಡೆಗೊಳಿಸುವ ಭರವಸೆ ನೀಡಿದ್ದಾರೆ ಎಂದರು.
ಕಾರ್ಯಕರ್ತರು ಬೂತ್ ಸಮಿತಿ ಪರಿಶೀಲನೆಗೊಳಿಸಿ ಮತದಾರರ ಪಟ್ಟಿಯಲ್ಲಿ ಪ್ರತಿ ಪೇಜ್‌ಗೆ ಒಬ್ಬರನ್ನು ಪ್ರಮುಖರನ್ನಾಗಿ ನೇಮಿಸಬೇಕು. ಹಾಗೆಯೇ ಜನರ ಸಮಸ್ಯೆ ಆಲಿಸುವ ಸಲುವಾಗಿ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಬೇಕು. ಕಡ್ಡಾಯವಾಗಿ ಮನೆ ಮನೆಗೆ ತೆರಳಿ ಪಕ್ಷದ ಬಾವುಟ ಕಟ್ಟಬೇಕು. ಅಲ್ಲದೆ, ನನ್ನ ಅವಧಿಯಲ್ಲಾದ ಕೆಲಸಗಳ ಬಗ್ಗೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳನ್ನು ಜನರಿಗೆ ತಿಳಿಸಬೇಕು ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಪಿ.ಮಹೇಶ್, ಜಿಪಂ ಮಾಜಿ ಸದಸ್ಯ ಸಿ.ಚಿಕ್ಕರಂಗನಾಯಕ, ಶಿವಮಾದಪ್ಪ, ಸುರೇಶ್, ಗ್ರಾಮದ ಮುಖಂಡರು, ಕಾರ್ಯಕರ್ತರು ಇದ್ದರು.