ಬಿಸಿಲ ತಾಪಕ್ಕೆ ಹೆಚ್ಚುತ್ತಿದೆ ಚರ್ಮ ವ್ಯಾದಿ

Skin problem
Published on

ಪಂಕಜ ಕೆ.ಎಂ.

ಬೆಂಗಳೂರು: ದಿನೇದಿನೆ ಏರುತ್ತಿರುವ ತಾಪಮಾನದಿಂದಾಗಿ ಕ್ಯಾಂಡಿಡಾ ಇನ್ಫೆಕ್ಷನ್, ಫಂಗಲ್ ಇನ್ಫೆಕ್ಷನ್, ಚಿಕನ್ ಪಾಕ್ಸ್, ಮೆಲಾಸ್ಮಾ, ಸನ್ ಟ್ಯಾನ್‌ನಂತಹ ಚರ್ಮ ಸಮಸ್ಯೆಗಳು ಜನರನ್ನು ಹೈರಾಣಾಗಿಸಿವೆ.

ನಗರದಲ್ಲಿ ಬಿಸಿಲ ಜಳದ ಜತೆಗೆ ನೀರಿನ ಸಮಸ್ಯೆ ಎದುರಾಗಿರುವುದರಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಚರ್ಮದ ಸಮಸ್ಯೆ ಶೇ.40 ಹೆಚ್ಚಳವಾಗಿದೆ. ತ್ವಚೆಯ ಕಾಳಜಿ ವಹಿಸದಿದ್ದರೆ ಸನ್ ಟ್ಯಾನ್, ಚರ್ಮದ ಡೀಹೈಡ್ರೇಷನ್, ಕೆಂಪು ದದ್ದು, ಬೆವರು ಹಾಗೂ ದೂಳಿನ ಅಲರ್ಜಿಯಂತಹ ಸಮಸ್ಯೆ ಕಾಡಲಿದೆ ಎನ್ನುತ್ತಾರೆ ಚರ್ಮರೋಗ ತಜ್ಞರು.

ಬೇಸಿಗೆಯಲ್ಲಿ ದೇಹವು ಹೆಚ್ಚು ಬೆವರುವುದು ಸಾಮಾನ್ಯ, ಬಹಳಷ್ಟು ಮಂದಿಗೆ ಇದು ಸೋಂಕಾಗಿ ಬಾದಿಸಲಿದೆ. ಅತಿಯಾದ ಬೆವರಿನಿಂದ ಅಲರ್ಜಿ, ತುರಿಕೆ ಕಾಣಿಸಿಕೊಳ್ಳುತ್ತದೆ. ಇದು ಮಕ್ಕಳಲ್ಲಿ ಒಬ್ಬರಿಂದ ಒಬ್ಬರಿಗೆ ಬೇಗನೆ ಹರಡುತ್ತದೆ. ಹೀಗಾಗಿ ದೇಹಾರೋಗ್ಯದ ಜೊತೆಗೆ ಚರ್ಮದ ರಕ್ಷಣೆಗೂ ಗಮನಹರಿಸುವ ಅಗತ್ಯವಿದೆ.

ಚಿಕನ್ ಪಾಕ್ಸ್: ವಾತಾವರಣ ಧೂಳಿನಿಂದ ಕೂಡಿರುವುದರಿಂದ ಮಕ್ಕಳಲ್ಲಿ ಚಿಕನ್‌ಪಾಕ್ಸ್ ಪ್ರಕರಣಗಳು ಹೆಚ್ಚುತ್ತಿವೆ. ಇದಲ್ಲದೆ ಕೈಕಾಲುಗಳ ಬೆರಳು ಸಂದು, ಕಿವಿಯ ಹಿಂಭಾಗದಲ್ಲಿ ಕೆಂಪು ಗುಳ್ಳೆಗಳಿಂದ ಕೂಡಿದ ಅಲರ್ಜಿ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಇದು ನೋವಿನಿಂದ ಕೂಡಿರುವ ಪರಿಣಾಮ ಮಕ್ಕಳಲ್ಲಿ ಜ್ವರ ಹಾಗೂ ಇತರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ.

ಕೂದಲಿನ ಸಮಸ್ಯೆ: ಬೇಸಿಗೆಯಲ್ಲಿ ಕೂದಲ ಬುಡದಲ್ಲಿ ಬೆವರು ಅಂಟಿ ತಲೆಹೊಟ್ಟು, ತುರಿಕೆ, ಅಲರ್ಜಿಯಂತಹ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ಆರೋಗ್ಯ, ಚರ್ಮದ ಜೊತೆಗೆ ಕೂದಲಿನ ಸಮಸ್ಯೆಗಳಿಂದ ಪಾರಾಗಲು ಹೆಚ್ಚು ದ್ರವರೂಪದ ಆಹಾರ ಸೇವಿಸಬೇಕು. ಗಂಜಿ, ತಿಳಿಮಜ್ಜಿಗೆ, ಎಳನೀರು, ಹಣ್ಣಿನ ರಸ, ಸೌತೆಕಾಯಿ, ಕಲ್ಲಂಗಡಿ ಹಣ್ಣು, ಮೋಸಂಬಿ, ಕಿತ್ತಲೆ, ದ್ರಾಕ್ಷಿ ಹಣ್ಣುಗಳನ್ನು ಸೇವಿಸಬೇಕು. ಮೊಳಕೆ ಕಾಳು, ತರಕಾರಿ, ಹಣ್ಣಿನ ಸಲಾಡ್ ಹೆಚ್ಚು ಸೇವಿಸುವುದು ಉತ್ತಮ.

ಚರ್ಮದ ರಕ್ಷಣೆ ಕ್ರಮಗಳು:

* ತಣ್ಣೀರು ಅಥವಾ ಉರುಗುಬೆಚ್ಚನೆ ನೀರಿನಲ್ಲಿ ಸ್ನಾನ ಮಾಡಬೇಕು

* ಶುಭ್ರ ಹಾಗೂ ಹಗುರವಾದ ಹತ್ತಿ ಉಡುಪು ಧರಿಸಬೇಕು

* ಬಿಸಿಲಿನಲ್ಲಿ ಮನೆಯಿಂದ ಹೊರ ಹೋಗುವುದನ್ನು ಕಡಿಮೆ ಮಾಡಬೇಕು

* ಹೊರಗೆ ಹೋಗುವ ಮುನ್ನ ಸನ್‌ಸ್ಕ್ರೀನ್ ಲೋಷನ್ ಬಳಕೆ ಉತ್ತಮ

* ಕಣ್ಣಿನ ರಕ್ಷಣೆಗೆ ಸನ್ ಗ್ಲಾಸ್ ಹಾಗೂ ಛತ್ರಿ ಬಳಕೆ ಮಾಡಬೇಕು

* ಹೊರ ಹೋಗುವಾಗ ಮನೆಯಿಂದ ನೀರು ಕೊಂಡೊಯ್ಯುವುದು ಉತ್ತಮ

* ಮನೆ ಆಹಾರಕ್ಕೆ ಹೆಚ್ಚು ಆದ್ಯತೆ ನೀಡಬೇಕು

* ಹೊರಗಿನ ಆಹಾರ ಪದಾರ್ಥಗಳ ಬಳಕೆ ಬೇಡ

* ಚರ್ಮದ ರಕ್ಷಣೆಗೆ ವೈದ್ಯರ ಸಲಹೆ ಪಡೆದು ಲೋಷನ್ ಮತ್ತು ಪೌಡರ್ ಬಳಕೆ ಮಾಡಿ

ಕೋಟ್

ಬಿಸಿಲ ತೀವ್ರವಾಗಿರುವ ಪರಿಣಾಮ ಕಳೆದ ಕೆಲ ದಿನಗಳಿಂದ ಂಗಲ್ ಇನ್‌ೆಕ್ಷನ್ (ನಿತ್ಯ ಶೇ. 40) ಪ್ರಕರಣಗಳು ವರದಿಯಾಗುತ್ತಿವೆ. ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಸಮಸ್ಯೆ ಗಂಭೀರವಾಗಲಿದೆ. ಬೊಜ್ಜು, ಮಧುಮೇಹ, ಸೂಕ್ಷ್ಮ ಚರ್ಮದವರಲ್ಲಿ ಹಾಗೂ ಬಿಸಿಲು ಮತ್ತು ಧೂಳಿನಲ್ಲಿ ಹೆಚ್ಚು ಸಮಯ ಕಳೆಯುವವರಲ್ಲಿ ಸಮಸ್ಯೆ ಕಂಡುಬರುತ್ತಿದೆ.

ಡಾ. ಗಿರೀಶ್, ಚರ್ಮರೋಗ ತಜ್ಞರು, ಇಎಸ್‌ಐ ಆಸ್ಪತ್ರೆ, ರಾಜಾಜಿನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net