ಬಿಳಿಕೆರೆ ಸರ್ಕಾರಿ ಶಾಲೆಗೆ ಜಿಪಂ ಸಿಇಒ ಭೇಟಿ

HUN-JULY-18-1{ZP CEO VISIT TO BILIKERE}
ಹುಣಸೂರು ತಾಲೂಕಿನ ಬಿಳಿಕೆರೆ ಗ್ರಂಥಾಲಯಕ್ಕೆ ಜಿ.ಪಂ.ಸಿಇಒ ಕೆ.ಎಂ.ಗಾಯಿತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಿ.ಪಿ.ಶಿವಶಂಕರ್ ಇದ್ದರು.
Published on

ಹುಣಸೂರು: ತಾಲೂಕಿನ ಬಿಳಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆ, ಗ್ರಂಥಾಲಯ ಮುಂತಾದ ಸ್ಥಳಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಿಳಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರಕ್ಕೆ ಭೇಟಿ ನೀಡಿ ಆರೋಗ್ಯ ಸಂರಕ್ಷಣೆ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರಲ್ಲದೆ, ಕಲಿಕೆಯಲ್ಲಿ ಆಸಕ್ತಿ ತೋರುವಂತೆ ಮಕ್ಕಳಿಗೆ ಕಿವಿಮಾತು ಹೇಳಿದರು.

ಶಾಲೆಯ ದಾಸೋಹ ಕೊಠಡಿಗೆ ಭೇಟಿ ನೀಡಿ ಮಕ್ಕಳಿಗೆ ತಯಾರಾಗುತ್ತಿದ್ದ ಆಹಾರ ಮತ್ತು ಸ್ಥಳದ ಶುಚಿತ್ವ ಹಾಗೂ ಗುಣಮಟ್ಟವನ್ನು ಪರಿಶೀಲಿಸಿದರು. ಅಲ್ಲದೆ ಸುಸರ್ಜಿತವಾದ ಶಾಲಾ ಕಟ್ಟಡ ನಿರ್ಮಾಣಕ್ಕೆ 15ನೇ ಹಣಕಾಸಿನಲ್ಲಿ ಅನುಮೋದನೆ ಪಡೆದುಕೊಳ್ಳಲು ಹಾಗೂ ಮಕ್ಕಳ ಕಲಿಕೆಗೆ ಪೂರಕವಾಗುವ ಆಟದ ಮೈದಾನ ನಿರ್ಮಿಸುವಂತೆ ತಾಪಂಇಒಗೆ ಸೂಚಿಸಿದರು.

ಬಳಿಕ ಬಿಳಿಕೆರೆ ಗ್ರಂಥಾಲಯಕ್ಕೆ ಭೇಟಿ ನೀಡಿ ಗ್ರಂಥಾಲಯದಲ್ಲಿರುವ ಮೂಲ ಸೌಕರ್ಯಗಳನ್ನು ಪರಿಶೀಲಿಸಿ, ಶೈಕ್ಷಣಿಕ ಚಟುವಟಿಕೆ ಹಮ್ಮಿಕೊಳ್ಳುವಂತೆ ಗ್ರಂಥಪಾಲಕರಿಗೆ ಸೂಚಿಸಿದರು. ಇದೇ ವೇಳೆ ಮಕ್ಕಳು ಮತ್ತು ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳೊಂದಿಗೆ ಸಂವಾದ ನಡೆಸಿ, ಗ್ರಾಮೀಣ ಭಾಗದಲ್ಲಿ ಅತ್ಯುತ್ತಮವಾಗಿ ನಿರ್ಮಾಣವಾಗಿರುವ ಗ್ರಂಥಾಲಯವನ್ನು ಬಳಸಿಕೊಂಡು ಉದ್ಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಅವಿರತ ಶ್ರಮ ವಹಿಸಬೇಕೆಂದು ಆತ್ಮಸ್ಥೈರ್ಯ ತುಂಬಿದರು.

ಗ್ರಾಮದ ಆಸರೆ ಸಂಜೀವಿನಿ ಫುಡ್ ಪ್ರಾಡಕ್ಟ್ ಸ್ಥಳಕ್ಕೆ ಭೇಟಿ ನೀಡಿ ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ನಂತರ ಗ್ರಾ.ಪಂ ಅಧ್ಯಕ್ಷ ಮತ್ತು ಸದಸ್ಯರೊಂದಿಗೆ ಪ್ರಗತಿ ಮತ್ತು ಸಮಸ್ಯೆಗಳ ಬಗ್ಗೆ ಸಂವಾದ ನಡೆಸಿದರು.ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ನಿಟ್ಟಿನಲ್ಲಿ ಸಹಕಾರ ನೀಡಬೇಕು. ಆ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಕೌಶಲಾಧಾರಿತ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕೆಂದು ಸಂಜೀವಿನಿ ಒಕ್ಕೂಟದ ಅಧ್ಯಕ್ಷರಿಗೆ ಸಲಹೆ ನೀಡಿದರು.

ಗ್ರಾಮಗಳಲ್ಲಿ ಜಾರಿಗೊಳಿಸಿರುವ ಜಲ್‌ಜೀವನ್ ಮಿಷನ್, ಜೆಎಂಎಂ ಕಾಮಗಾರಿಯಲ್ಲಿ ಉಂಟಾಗಿರುವ ಸಮಸ್ಯೆ ಕುರಿತು ಕುಡಿಯುವ ಮತ್ತು ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಖಲೀಂ ಅವರೊಂದಿಗೆ ಚರ್ಚಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪರೀಕ್ಷೆ ನಡೆಸುವುದರ ಜತೆಗೆ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು.

ನರೇಗಾ ಯೋಜನೆಯಡಿ ಅನುಷ್ಠಾನ ಹಂತದಲ್ಲಿರುವ ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿ ಹಾಗೂ ಪಂಚ ಅಭಿಯಾನ ಅನುಷ್ಠಾನ, ಗೋಮಾಳ, ಬೂದು ನೀರು ನಿರ್ವಹಣೆ, ಇಂಗು ಗುಂಡಿ ಹಾಗೂ ಇತರ ಕಾಮಗಾರಿಗಳ ಬಗ್ಗೆ ಚರ್ಚಿಸಿ ಹೆಚ್ಚೆಚ್ಚು ಮಾನವ ದಿನಗಳನ್ನು ಸೃಜಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್.ಎಂ.ಮಹದೇವಸ್ವಾಮಿಗೆ ಸೂಚಿಸಿದರು.

ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಿ.ಕೆ.ಮನು, ಕಾರ್ಯಪಾಲಕ ಇಂಜಿನಿಯರ್ ನರಸಿಂಹಯ್ಯ, ಬಿಳಿಕೆರೆ ಗ್ರಾ.ಪಂ. ಅಧ್ಯಕ್ಷ ಬಿ.ಪಿ.ಶಿವಶಂಕರ್, ಉಪಾಧ್ಯಕ್ಷೆ ಮಂಚಮ್ಮ, ಕಾರ್ಯದರ್ಶಿ ಸೋಮಶೇಖರ್, ಪಂಚಾಯಿತಿ ಸಿಬ್ಬಂದಿ ವಸಂತ ಕುಮಾರ್, ಬಿ.ಸಿಲೋಕೇಶ್, ಸದಸ್ಯರಾದ ಜ್ಯೋತಿ, ಎನ್.ಆರ್.ಎಲ್.ಎಂ ಜಿ.ಪಿ.ಎಲ್.ಎಫ್ ಅಧ್ಯಕ್ಷೆ ಗಾಯಿತ್ರಿ ವಿಜಯೇಂದ್ರ, ಕ್ಲಸ್ಟರ್ ಸೂಪರ್ ವೈಸರ್ ಪ್ರವೀಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net