ಬೆಂಗಳೂರು: ಬಿಬಿಎಂಪಿ ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದರೂ ಹಣ ಪಾವತಿ ವಿಳಂಬ ವಿರೋಧಿಸಿ ನಗರದಾದ್ಯಂತ ಸ್ಥಗಿತಗೊಳಿಸಿರುವ ಯಾವುದೇ ಕೆಲಸಗಳನ್ನು ಪುನಾರಂಭಿಸದಿರಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘ ನಿರ್ಧರಿಸಿದೆ.
ಸೋಮವಾರದಿಂದಲೇ ಈ ನಿಲುವು ಕೈಗೊಳ್ಳಲಾಗಿದೆ. ಬಿಲ್ ಪಾವತಿ ಮಾಡದ ಹೊರತು ನಾವು ಯಾವುದೇ ರೀತಿಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಿಲ್ಲ. 2-3 ವರ್ಷದ ಹಿಂದಿನ ಕಾಮಗಾರಿಗಳ ಬಿಲ್ ಬಿಡುಗಡೆ ಮಾಡುವವರೆಗೂ ಈ ನಿರ್ಧಾರ ಚಾಲ್ತಿಯಲ್ಲಿರುತ್ತದೆ ಎಂದು ಸಂಘದ ಅಧ್ಯಕ್ಷ ಆರ್.ಅಂಬಿಕಾಪತಿ ತಿಳಿಸಿದ್ದಾರೆ.
ಈ ತಿಂಗಳ 5ರಂದು ಸರ್ಕಾರ ಬಿಬಿಎಂಪಿಯಲ್ಲಿ 2019-20ರಿಂದ 2022-23ರ ವರೆಗೆ ನಡೆದಿರುವ ವಿವಿಧ ಕಾಮಗಾರಿಗಳ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಿದೆ. ಇದರಿಂದಾಗಿ ತನಿಖೆ ವಿಳಂಬ ಆದಲ್ಲಿ ಬಾಕಿ ಬಿಲ್ ಬಿಡುಗಡೆಯಾಗುವುದಿಲ್ಲ. ಈಗಾಗಲೇ ಜ್ಯೇಷ್ಠತೆ ಆಧಾರದಲ್ಲಿ ಎಲ್‌ಒಸಿ ಬಿಡುಗಡೆಯಾಗಿದ್ದರೂ, ಕಳೆದ ಮೂರು ತಿಂಗಳಿನಿಂದ ಬಿಲ್ ಪಾವತಿ ತಡೆಹಿಡಿಯಲಾಗಿದೆ. ಇದನ್ನು ವಿರೋಧಿಸಿ ಸಂಘವು ಹೊಸದಾಗಿ ಕಾಮಗಾರಿಗಳನ್ನು ಆರಂಭಿಸದಿರಲು ತೀರ್ಮಾನಿಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.