ವಿಜಯವಾಣಿ ಸುದ್ದಿಜಾಲ ಕೋಲಾರ
ಬಂಗಾಳಕೊಲ್ಲಿ ವಾಯುಭಾರ ಕುಸಿತದಿಂದ ಫೆಂಗಲ್ ಚಂಡಮಾರುತ ೨ನೇ ಬಾರಿ ಅಪ್ಪಳಿಸಿದ ಪರಿಣಾಮ ಬುಧವಾರ ಮತ್ತು ಗುರುವಾರ ೨ ದಿನಗಳ ಕಾಲ ಜಡಿಮಳೆ ಸುರಿದ ಪರಿಣಾಮ ರಾಗಿ ಬೆಳೆ ಸೇರಿದಂತೆ ರೈತರ ಬೆಳೆಗಳಿಗೆ ಹಾನಿ ಉಂಟಾಗಿತ್ತು.
ಶುಕ್ರವಾರ ಸ್ವಲ್ಪ ಮಟ್ಟಿಗೆ ಜಡಿಮಳೆ ಬಿಡುವು ನೀಡಿತ್ತು. ಶನಿವಾರ ವಿರಾಮ ನೀಡಿದ ಕಾರಣ ರಾಗಿ ಬೆಳೆ ಬೆಳೆಗಾರರಲ್ಲಿ ಉಂಟಾಗಿದ್ದ ನಿರಾಸೆ ಸ್ವಲ್ಪ ಮಟ್ಟಿಗೆ ಸಡಿಲಗೊಂಡಿತ್ತು. ರಾಗಿ ತೆನೆ ಕಟಾವು ಮಾಡಿದವರಿಗೆ ನಿರಾಸೆ ಉಂಟಾಗಿತ್ತು. ತೆನೆ ಒಣಗಿಸಲು ಬಿಡುವು ನೀಡದೆ ಮಳೆ ಸುರಿದ ಕಾರಣ ರಾಗಿಗೆ ಹಾನಿಯಾಗುತ್ತಿದೆ ಎಂದು ಅಂದುಕೊAಡಿದ್ದರು. ೨ ದಿನಕ್ಕೆ ಮಾತ್ರ ಮಳೆ ಸೀಮಿತವಾಗಿದ್ದರಿಂದ ರೈತರು ನೆಟ್ಟುಸಿರು ಬಿಡುವಂತಾಯಿತು.
ಕೋಲಾರ ಜಿಲ್ಲೆಯಲ್ಲಿ ರಾಗಿ ಪ್ರಮುಖ ಬೆಳೆಯಾಗಿದ್ದು, ರಾಗಿ ತೆನೆ ಕಟಾವಿಗೆ ಬಂದಿದ್ದ ಕಾರಣ ರಾಗಿ ತೆನೆಯನ್ನು ಕಟಾವು ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಫೆಂಗಲ್ ಚಂಡಮಾರುತ ಅಪ್ಪಳಿಸಿದ ಪರಿಣಾಮ ೨ ದಿನಗಳ ಕಾಲ ಮಳೆ ಸುರಿಯಿತು. ಇದರಿಂದ ಅರ್ಧ ಭಾಗ ಕಟಾವು ಮಾಡಿದ್ದ ಹಾಗೂ ಪೂರ್ಣ ಪ್ರಮಾಣದಲ್ಲಿ ಕಟಾವು ಮಾಡಿದ ತೆನೆ ಒಣಗಿಸಲು ಸಾಧ್ಯವಾಗದೆ ಟಾರ್ಪಲ್ಲನ್ನು ಹೊದಿಸಬೇಕಾಯಿತು.
ರಾಗಿ ತೆನೆ ಒಣಗದೇ ಇದ್ದರೆ ರಾಗಿ ಕಪ್ಪಾಗುವ ಭೀತಿ ರೈತರನ್ನು ಆವರಿಸಿತ್ತು. ಇನ್ನು ಕೆಲವು ಹೊಲಗಳಲ್ಲಿ ತೆನೆ ಕಟಾವು ಮಾಡಲು ಮಳೆ ಅಡ್ಡ ಆದ ಕಾರಣ ಹಾಗೂ ಆರಿದ ರಾಗಿ ತೆನೆ ಮೇಲೆ ಮಳೆ ಬಿದ್ದ ಪರಿಣಾಮ ತೇವಾಂಶ ಹೆಚ್ಚಾಗಿ ಹೊಲಗಳಲ್ಲಿಯೇ ರಾಗಿ ಮೊಳಕೆ ಒಡೆಯಲು ಪ್ರಾರಂಭಿಸಿದೆ. ಇದರಿಂದ ರೈತ ಆತಂಕಕ್ಕೆ ಒಳಗಾಗಿ ಶುಕ್ರವಾರ ಮತ್ತು ಶನಿವಾರ ೨ ದಿನಗಳ ಕಾಲ ಸ್ವಲ್ಪ ಮಟ್ಟಿಗೆ ಮಳೆ ಬಿಡುವು ನೀಡಿದ ಪರಿಣಾಮ ರಾಗಿ ತೆನೆ ಕಟಾವು ಮಾಡಿ ಉಡ್ಡೆ ಹಾಕಿದ್ದವರು ತೆನೆಯನ್ನು ಆರಿಸಲು ಅನುಕೂಲವಾಯಿತು.
ಮಳೆ ಸ್ವಲ್ಪ ಮಟ್ಟಿಗೆ ಹಿನ್ನಡೆಯಾದ ಕಾರಣ ಹೊಲಗಳಲ್ಲಿ ತೆನೆಯನ್ನು ಕಟಾವು ಮಾಡಲು ಬಿಡುವು ನೀಡಿತು. ಇದರಿಂದ ಆತಂಕಕ್ಕೆ ಒಳಗಾಗಿದ್ದ ರೈತರು ನೆಟ್ಟುಸಿರು ಬಿಡುವಂತಾಗಿದೆ.
ಉದುರಿದ ಅವರೇ ಹೂವು :
ಕಳೆದ ೨ ದಿನಗಳ ಕಾಲ ಜಡಿಮಳೆ ಮತ್ತು ಶೀತಗಾಳಿಯಿಂದಾಗಿ ಅವರೇ ಗಿಡಗಳಲ್ಲಿ ಅವರೇ ಹೂವು ಉದುರಿಹೋಗುತ್ತಿತ್ತು. ರಾಗಿಯ ಜೊತೆಗೆ ಅವರೇಕಾಯಿಯನ್ನು ಹೊಲಗಳಲ್ಲಿ ಬೆಳೆಯುತ್ತಾರೆ. ರಾಗಿ ತೆನೆ ಕಟಾವು ಸಂದರ್ಭದಲ್ಲಿ ಅವರೇ ಹೂವು ಬರುತ್ತದೆ. ನಂತರ ಕಾಯಿಯಾಗುತ್ತದೆ. ಈಗಾಗಲೇ ಶೇ.೫೦ ರಷ್ಟು ಅವರೇಕಾಯಿ ಕಚ್ಚಿತ್ತು. ಶೇ.೫೦ ರಷ್ಟು ಹೂವು ಬಂದಿತ್ತು. ಶೀತಗಾಳಿ ಮತ್ತು ಜಡಿಮಳೆಗೆ ಶೇ.೨೫ ರಷ್ಟು ಹೂವು ಉದುರುವಂತಾಯಿತು.
ತೊಗರಿ ಬೆಳೆಯ ಗತಿಯು ಇದೇ ರೀತಿಯಾಗಿದ್ದು, ಶೀತಗಾಳಿ ಮತ್ತು ಜಡಿಮಳೆಗೆ ಸ್ವಲ್ಪ ಮಟ್ಟಿಗೆ ಹೂವು ಉದುರುವಂತಾಗಿದೆ. ಈಗಾಗಲೇ ತೊಗರಿ ಶೇ.೭೫ ರಷ್ಟು ಕಾಯಿ ಕಚ್ಚಿದ್ದು, ಶೇ.೨೫ ಹೂವು ಗಿಡಗಳಲ್ಲಿಯೇ ಇದ್ದು, ಹೂವು ಉದುರುವಂತಾಗಿದೆ.
ಚಿತ್ರ ೧೪ ಕೆ.ಎಲ್.ಆರ್. ೦೨ : ಜಡಿಮಳೆ ಬಿಡುವು ಕೊಟ್ಟ ಕಾರಣ ರೈತರು ಹೊಲಗಳಲ್ಲಿ ಕಟಾವು ಮಾಡಿ ಉಡ್ಡೆಯಾಕ್ಕಿದ್ದ ತೆನೆಯನ್ನು ಆರಿಸುತ್ತಿರುವುದು.