

ಬೆಂಗಳೂರು: ನಗರದ ಪ್ರಮುಖ ಬೀದಿಗಳು, ರಸ್ತೆಗಳಲ್ಲಿ ಬಿಡಾಡಿ ದನಗಳಿಂದ ಆಗುತ್ತಿರುವ ಸಮಸ್ಯೆ ನಿವಾರಿಸಲು ಮುಂದಾಗಿರುವ ಬಿಬಿಎಂಪಿ, ದನಗಳನ್ನು ಶಾಶ್ವತವಾಗಿ ಗೋಶಾಲೆಗೆ ಬಿಡಲು ಚಿಂತನೆ ನಡೆಸಿದೆ.
ನಗರದಲ್ಲಿ ಸುಮಾರು 78 ಲಕ್ಷಕ್ಕೂ ಅಧಿಕ ವಾಹನಗಳು ಸಂಚಾರ ಮಾಡುತ್ತವೆ. ಆದರೆ, ವಿಲ್ಸನ್ ಗಾರ್ಡನ್, ಮಲ್ಲೇಶ್ವರ, ಯಶವಂತಪುರ, ಚಾಮರಾಜಪೇಟೆ ಬಸವನಗುಡಿ, ಕೆ.ಆರ್.ಪುರದ ಕೆಲವು ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಸಾರ್ವಜನಿಕರಿಂದ ಸಂಚಾರ ಪೊಲೀಸರಿಗೆ ದೂರುಗಳ ಸುರಿಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾದ ಪಾಲಿಕೆ, 2020ರ ಸೆ.25ರವರೆಗೆ 102 ದನಗಳ ಮಾಲೀಕರಿಗೆ ದಂಡ ವಿಧಿಸಿದೆ.
ತಿಂಗಳಲ್ಲಿ ಯೋಜನೆ ಸಿದ್ಧ: ರಸ್ತೆಗಳಲ್ಲಿ ಸಂಚಾರ ಮಾಡುವ ಬಿಡಾಡಿ ದನಗಳನ್ನು ಶಾಶ್ವತವಾಗಿ ಗೋಶಾಲೆಗೆ ದನ ಬಿಡುವ ಯೋಜನೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ತಿಂಗಳಲ್ಲಿ ಯೋಜನೆ ಸಿದ್ಧಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಎಲ್ಲ ಮಾಲೀಕರು ಕೊಟ್ಟಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ರಸ್ತೆಯಲ್ಲಿ ದನಗಳು ಕಾಣಿಸಿಕೊಂಡರೆ ಪಾಲಿಕೆ ನಿಯಂತ್ರಣ ಕೊಠಡಿಗಳಿಗೆ ಕರೆ ಮಾಡುವಂತೆ (ದೂ: 080- 2297 5595, 2222 1188) ಪಾಲಿಕೆ ಅಧಿಕಾರಿ ತಿಳಿಸಿದ್ದಾರೆ.