

ಬಾಳೆಹೊನ್ನೂರು: ಪಟ್ಟಣದ ವಿಜಯಮಾತೆ ಚರ್ಚ್‌ನಲ್ಲಿ ಸೋಮವಾರ ಕ್ರೈಸ್ತರು ಸಡಗರ, ಸಂಭ್ರಮದಿಂದ ಮಾತೆ ಮರಿಯ ಜಯಂತಿ ಹಾಗೂ ಹೊಸಕ್ಕಿ ಹಬ್ಬವನ್ನು ಆಚರಿಸಿದರು.
ಚರ್ಚ್‌ನ ಧರ್ಮಗುರು ಪೌಲ್ ಡಿಸೋಜಾ ಅವರು ಮರಿಯ ಜಯಂತಿ ಅಂಗವಾಗಿ ವಿಶೇಷ ಬಲಿಪೂಜೆ ನೆರವೇರಿಸಿದರು.
ಧರ್ಮಗುರು ಪೌಲ್ ಡಿಸೋಜಾ ಮಾತನಾಡಿ, ಈ ಬಾರಿಯ ಮರಿಯ ಜಯಂತಿಯ ಸಂದರ್ಭದಲ್ಲಿ ಪ್ರತಿಯೊಬ್ಬ ಸಮುದಾಯ ಬಾಂಧವರು ಸಮಾಜ, ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುವಂತೆ ದೇವರಲ್ಲಿ ಪ್ರಾರ್ಥಿಸಬೇಕಿದೆ. ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಸ್ನೇಹ ಬಾಂಧವ್ಯಗಳು ವೃದ್ಧಿಯಾಗಬೇಕಿದೆ ಎಂದರು.
ಭೂಮಿಯಲ್ಲಿ ಮನುಷ್ಯನಿಗೆ ಅಗತ್ಯವಿರುವ ಎಲ್ಲ ವಸ್ತುಗಳು ಪ್ರಕೃತಿಯಲ್ಲಿ ಲಭ್ಯವಿದ್ದು ಈ ಹಿನ್ನೆಲೆಯಲ್ಲಿ ಹೊಸಕ್ಕಿ ಹಬ್ಬದ ಮೂಲಕ ಪ್ರಕೃತಿ ಮಾತೆಯನ್ನು ನಮಿಸುವ ಕಾರ್ಯ ಮರಿಯ ಜಯಂತಿಯಂದು ಮಾಡಲಾಗುತ್ತಿದೆ. ಮರಿಯ ಜಯಂತಿ ಹಬ್ಬವು ಕ್ರೈಸ್ತ ಕುಟುಂಬಗಳ ಸದಸ್ಯರ ಬಾಂಧವ್ಯವನ್ನು ಬೆಸೆಯುವ ಹಬ್ಬವಾಗಿದೆ ಎಂದರು.
ಮರಿಯ ಜಯಂತಿ ಸಂದರ್ಭದಲ್ಲಿ ಪ್ರತಿಯೊಂದು ಕುಟುಂಬಗಳು ಒಗ್ಗಟ್ಟಿನ ಸಂಕೇತವಾಗಿರುವ ಕುರಿತು ಪ್ರತಿಜ್ಞೆ ಕೈಗೊಳ್ಳಬೇಕಿದೆ. ಯುವಜನರು ಮೊಬೈಲ್ ದೂರ ಮಾಡಿ ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಬೇಕಿದೆ ಎಂದರು.
ಮರಿಯ ಜಯಂತಿಯ ಶುಭ ಸಂದರ್ಭದಲ್ಲಿ ಪ್ರತಿ ಕ್ರೈಸ್ತ ಕುಟುಂಬದವರಿಗೆ ಭತ್ತದ ತೆನೆಗಳನ್ನು ಆಶೀರ್ವದಿಸಿ, ಸಿಹಿಯನ್ನು ವಿತರಿಸಲಾಯಿತು. ಭಕ್ತರು ಮಾತೆ ಮರಿಯಮ್ಮನವರ ವಿಗ್ರಹಕ್ಕೆ ವಿವಿಧ ಬಗೆಯ ಪುಷ್ಪಗಳನ್ನು ಅರ್ಪಿಸಿ ನಮಿಸಿದರು.
ಕ್ರೈಸ್ತ ಬಾಂಧವರಿಗಾಗಿ ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ನೀಡಲಾಯಿತು. ಮರಿಯಮ್ಮ ಅವರಿಗೆ ಅರ್ಪಿಸಿದ ಪುಷ್ಪಗಳನ್ನು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಸಹಾಯಾರ್ಥ ಹರಾಜು ಕಾರ್ಯ ನಡೆಸಲಾಯಿತು.
ನಿರ್ಮಲ ಕಾನ್ವೆಂಟ್‌ನ ಸಿಸ್ಟರ್ ಸುಪಿರಿಯರ್ ಎವಲಿನ್, ಚರ್ಚ್‌ನ ಪಾಲನಾ ಸಮಿತಿ ಸದಸ್ಯರು, ಕನ್ಯಾಸೀಯರು, ಐಸಿವೈಎಂ ಸಮಿತಿ, ಆಲ್ಟರ್ ಬಾಯ್ಸ, ವಿಜಯಮಾತೆ ಮೆನ್ಸ್ ಕ್ಲಬ್ ಸದಸ್ಯರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.