

ಬಾಳೆಹೊನ್ನೂರು: ಹೋಬಳಿಯಾದ್ಯಂತ ಕೇರಳಿಯನ್ನರು ಹಾಗೂ ಮಲೆಯಾಳಿ ಬಾಂಧವರು ಮಂಗಳವಾರ ತಿರು ಓಣಂ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.
ಓಣಂ ಹಬ್ಬದ ಅಂಗವಾಗಿ ಎಂಟು ದಿನಗಳ ಮೊದಲೇ ಕೇರಳಿಯನ್ನರು ಮನೆಗಳ ಮುಂದೆ ಪ್ರತಿನಿತ್ಯ ವಿವಿಧ ಮಾದರಿಯ ಪೂಕಳಂ (ಹೂವಿನ ರಂಗೋಲಿ) ಬರೆದು ಹಬ್ಬವನ್ನು ಸ್ವಾಗತಿಸಿದರು. ಹೋಬಳಿ ವ್ಯಾಪ್ತಿಯ ಕೇರಳಿಯನ್ನರ ಮನೆಯಂಗಳದಲ್ಲಿ ಹಲವು ಬಗೆಯ ಪುಷ್ಪಗಳಿಂದ ರಚಿಸಿದ್ದ ವಿವಿಧ ಮಾದರಿಯ ಚಿತ್ತಾರದ ಆಕರ್ಷಕ ಭಾರಿ ಗಾತ್ರದ ಪೂಕಳಂಗಳು ನೋಡುಗರ ಗಮನ ಸೆಳೆಯುತ್ತಿದ್ದವು.
ಪೂಕಳಂ ರಚಿಸಿದ ಮಲೆಯಾಳಿಗರು ದೇವಾಲಯಗಳಲ್ಲಿ ಹಾಗೂ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ಮನೆಗಳಲ್ಲಿ ಕೇರಳದ ವಿಶೇಷ ಖಾದ್ಯಗಳನ್ನು ತಯಾರಿಸಿ ಅಕ್ಕಪಕ್ಕದವರಿಗೆ ಹಂಚಿದರು.