ಬಂಗಾರಪ್ಪ ರಾಜಕಾರಣಿಗಳಿಗೆ ಸ್ಫೂರ್ತಿ

20 sor 6 bangarapa
ಸೊರಬದ ಬಂಗಾರಧಾಮದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಜನ್ಮದಿನ ಕಾರ್ಯಕ್ರಮದಲ್ಲಿ ಸಾಧಕರಿಗೆ ಬಂಗಾರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
Published on

ಸೊರಬ: ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನಮಾನಸದಲ್ಲಿ ಉಳಿಯುವ ಜತೆಗೆ ಯುವ ರಾಜಕಾರಣಿಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದು ರಾಜ್ಯ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

ಪಟ್ಟಣದ ಬಂಗಾರಧಾಮದ ಆವರಣದಲ್ಲಿ ಎಸ್. ಬಂಗಾರಪ್ಪ ಫೌಂಡೇಶನ್ ಹಾಗೂ ಎಸ್. ಬಂಗಾರಪ್ಪ ವಿಚಾರ ವೇದಿಕೆಯಿಂದ ಶನಿವಾರ ಹಮ್ಮಿಕೊಂಡಿದ್ದ ಎಸ್. ಬಂಗಾರಪ್ಪ ಅವರ 92ನೇ ಜನ್ಮದಿನ ಹಾಗೂ ನಮನ- ಚಿಂತನ-ಸನ್ಮಾನ, ಜಾನಪದ ವೈಭವ ಮತ್ತು ಬಂಗಾರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದುಳಿದ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಗಣತಿ ನಡೆಸಲಾಯಿತು. ಜಾತಿಗಣತಿಯ ವರದಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುವುದು ಸಲ್ಲದು. ವರದಿ ಬಿಡುಗಡೆಯ ತರುವಾಯ ಭಿನ್ನಾಭಿಪ್ರಾಯಗಳಿದ್ದರೆ ಅವುಗಳನ್ನು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಚಲನಚಿತ್ರ ನಟ ಡಾ. ಶಿವರಾಜ್ ಕುಮಾರ್ ಮಾತನಾಡಿ, ಬಂಗಾರಪ್ಪ ಬಡವರ ಪರವಾಗಿ ನೀಡಿದ ಕೊಡುಗೆ ಅಪಾರ ಎಂದರು. ಸಾಹಿತ್ಯ ಬಂಗಾರ ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಕುಂ. ವೀರಭದ್ರಪ್ಪ ಮಾತನಾಡಿ, ಬಂಗಾರಪ್ಪ ಅವರು ದೂರದೃಷ್ಠಿ ಹೊಂದಿದ್ದ ವರ್ಣರಂಜಿತ ರಾಜಕಾರಣಿಯಾಗಿದ್ದರು ಎಂದರು. ಸಚಿವ ಎಸ್. ಮಧು ಬಂಗಾರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇವಾ ಬಂಗಾರ ಪ್ರಶಸ್ತಿಯನ್ನು ಎಸ್.ಜಿ.ಸುಶೀಲಮ್ಮ, ರಂಗ ಬಂಗಾರ ಪ್ರಶಸ್ತಿಯನ್ನು ಪ್ರತಿಭಾ ನಾರಾಯಣ್ ಅವರಿಗೆ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಗಾರಪ್ಪ ಅವರ ಒಡನಾಡಿ ಬಸಪ್ಪ ಅಂಕರವಳ್ಳಿ ವಹಿಸಿದ್ದರು. ಬಂಗಾರಪ್ಪ ವಿಚಾರ ವೇದಿಕೆ ಅಧ್ಯಕ್ಷ ವೇಣು ಗೋಪಾಲ್ ನಾಯಕ್, ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ ಮೂರ್ತಿ, ಶಾಸಕ ಭೀಮಣ್ಣ ನಾಯಕ್, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಬಲ್ಕೀಷ್ ಭಾನು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರ್. ಪ್ರಸನ್ನಕುಮಾರ್, ಗೀತಾ ಶಿವರಾಜ್ ಕುಮಾರ್, ಅನಿತಾ ಮಧು ಬಂಗಾರಪ್ಪ, ಸೂರ್ಯ ಮಧು ಬಂಗಾರಪ್ಪ, ಮುಖಂಡರಾದ ಕಲಗೋಡು ರತ್ನಾಕರ, ನಾಗರಾಜ ಗೌಡ, ವೈ.ಎಚ್. ನಾಗರಾಜ್, ಡಿ.ಬಿ.ಅಣ್ಣಪ್ಪ, ಸದಾನಂದಗೌಡ ಬಿಳಗಲಿ, ಕೆ.ಪಿ. ರುದ್ರಗೌಡ, ಎಚ್. ಗಣಪತಿ, ಎಂ.ಡಿ. ಶೇಖರ್, ಶಿವಲಿಂಗೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net