ಪ್ರಾಸ್ಟೇಟ್ ಸಮಸ್ಯೆಗೆ ಯಶಸ್ವಿ ಶಸ್ತ್ರಚಿಕಿತ್ಸೆ

Bdk_Health-Checkup
Published on

ಪಾರ್ಕಿನ್ಸನ್ ಕಾಯಿಲೆಯಿಂದಾಗಿ ಮಿದುಳಿನಲ್ಲಿ ಪೇಸ್‌ಮೇಕರ್ ಮಾದರಿಯ ಸಾಧನ ಅಳವಡಿಸಿಕೊಂಡಿದ್ದ, ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ, ಪ್ರಾಸ್ಟೇಟ್‌ನಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದ ಸುಮಾರು 70 ವರ್ಷದ ನಾಗರಿಕರೊಬ್ಬರಿಗೆ ಮೈಸೂರಿನಲ್ಲಿ ಮೊದಲ ಬಾರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಲೇಸರ್ ವಿಧಾನದ ಮೂಲಕ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಆಸ್ಪತ್ರೆ ತಜ್ಞ ವೈದ್ಯ ಡಾ.ಟಿ.ಪಿ.ದಿನೇಶ್‌ಕುಮಾರ್ ತಿಳಿಸಿದರು.

ಪುರುಷರಲ್ಲಿ ಸಾಮಾನ್ಯವಾಗಿ ಪ್ರಾಸ್ಟೇಟ್‌ನಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ವೇಳೆ ಸಾಮಾನ್ಯ ಮಾದರಿಯ ಶಸ್ತ್ರಚಿಕಿತ್ಸೆ ಸಾಧ್ಯ. ಆದರೆ, ಈ ವ್ಯಕ್ತಿಗೆ ಮಿದುಳಿನಲ್ಲಿ ಪೇಸ್‌ಮೇಕರ್ ಮಾದರಿಯ ಸಾಧನವಿದ್ದ ಕಾರಣ ಸಾಂಪ್ರದಾಯಿಕ ವಿದ್ಯುತ್ ತರಂಗ ಬಳಸುವುದು ಅಪಾಯಕಾರಿಯಾಗಿತ್ತು. ಅಲ್ಲದೆ, ಬೆನ್ನುಮೂಳೆ ಶಸ್ತ್ರಚಿಕಿತ್ಸೆಯನ್ನೂ ಪಡೆದಿದ್ದರು. ಹೀಗಾಗಿ ಇವರಿಗೆ ಪರ್ಯಾಯ ಶಸ್ತ್ರಚಿಕಿತ್ಸೆ ಬಗ್ಗೆ ಆಲೋಚಿಸಲಾಯಿತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೋಗಿಗೆ ಹೋಲ್ಮಿಯಮ್ ಲೇಸರ್ ಎನ್ಯುಕ್ಲಿಯೇಷನ್ ಎಂಬ ಕಡಿಮೆ ಸಮಸ್ಯೆಯುಂಟು ಮಾಡಬಹುದಾದ ವಿಧಾನ ಆಯ್ಕೆ ಮಾಡಿಕೊಂಡು ಪ್ರಾಸ್ಟೇಟ್‌ನಲ್ಲಿ ಬೆಳೆದಿದ್ದ ಅನಗತ್ಯ ಅಂಗಾಂಶವನ್ನು ತೆಗೆದುಹಾಕಲಾಯಿತು. ಈ ವಿಧಾನ ಹೆಚ್ಚುವರಿ ಅಂಗಾಂಶವನ್ನು ನಿಖರವಾಗಿ ಕತ್ತರಿಸುತ್ತದೆ. ಕಡಿಮೆ ರಕ್ತಸ್ರಾವದ್ದಾಗಿದೆ. ಈ ಶಸ್ತ್ರಚಿಕಿತ್ಸೆಗಾಗಿ ರೋಗಿಗೆ ಸುಮಾರು ಒಂದೂವರೆ ಲಕ್ಷ ರೂ. ಖರ್ಚಾಗಿದೆ ಎಂದು ಮಾಹಿತಿ ನೀಡಿದರು.

ಸಿಒಪಿಡಿಯಿಂದ ಬಳಲುತ್ತಿರುವವರು, ದೀರ್ಘಕಾಲದ ಅನಿಯಂತ್ರಿತ ಮಧುಮೇಹ, ಅಧಿಕ ರಕ್ತದೊತ್ತಡ, ಸ್ಟ್ರೋಕ್‌ನಿಂದ ಬಳಲುತ್ತಿರುವವರಿಗೆ ಇದು ಸೂಕ್ತ ಶಸ್ತ್ರಚಿಕಿತ್ಸಾ ವಿಧಾನವಾಗಿದೆ ಎಂದು ವಿವರಿಸಿದರು.

ಪ್ರಾಸ್ಟೇಟ್ ಕ್ಯಾನ್ಸರ್ ಭಾರತದಲ್ಲಿ ಅಗ್ರ ಹತ್ತು ಪ್ರಮುಖ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಇದು ಸಾಮಾನ್ಯವಾಗಿ 65 ವರ್ಷಕ್ಕಿಂತ ಮೇಲ್ಪಟ್ಟ ಪುರುಷರ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ, ಇತ್ತೀಚೆಗೆ ಮೆಟ್ರೋಪಾಲಿಟನ್ ನಗರಗಳಲ್ಲಿ ವಾಸಿಸುವ 35-44 ಮತ್ತು 55-64 ವಯಸ್ಸಿನ ಪುರುಷರಲ್ಲಿ ಕ್ಯಾನ್ಸರ್ ವರದಿಗಳು ಹೆಚ್ಚಾಗುತ್ತಿವೆ. ಆದ್ದರಿಂದ ನಿಯಮಿತ ತಪಾಸಣೆಗೆ ಒಳಗಾಗುವುದು ಸೂಕ್ತ ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net