

ಬಾಳೆಹೊನ್ನೂರು: ಸಮಾಜದಲ್ಲಿ ನಾನು ಶ್ರೀಮಂತನಾಗಬೇಕು. ದೊಡ್ಡ ವ್ಯಕ್ತಿಯಾಗಬೇಕು ಎಂದು ಪೈಪೋಟಿ ಶುರುವಾಗಿದ್ದು ಇದರ ನಡುವೆ ಪ್ರಾಮಾಣಿಕರಿಗೆ ಬೆಲೆ ಇಲ್ಲದಂತಾಗಿದೆ ಎಂದು ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಹೇಳಿದರು.
ಪಟ್ಟಣದ ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಶನಿವಾರ ಆಯೋಜಿಸಿದ್ದ 2025ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನದಲ್ಲಿ ಜನರ ಸೇವೆಗಾಗಿ ರಚಿಸಿರುವ ಸಂಘ, ಸಂಸ್ಥೆ, ಇಲಾಖೆಗಳಲ್ಲಿ ಅನ್ಯಾಯ ಕಾಣುತ್ತಿದ್ದು ಇದು ವ್ಯಕ್ತಿಗಳ ತಪ್ಪಲ್ಲ. ಸಮಾಜದ ತಪ್ಪಾಗಿದೆ. ಸಮಾಜದ ಭಾವನೆಯಲ್ಲಿ ಸಾಕಷ್ಟು ಬದಲಾವಣೆಗಳು ಬಂದಿವೆ. ಸಂವಿಧಾನದ ಚೌಕಟ್ಟಿನಲ್ಲಿ ಶ್ರೀಮಂತ, ದೊಡ್ಡ ವ್ಯಕ್ತಿ ಆದರೆ ತಪ್ಪಿಲ್ಲ. ಆದರೆ ದುರಾಸೆ ಕಾರಣದಿಂದ ವಾಮಮಾರ್ಗದಿಂದ ಶ್ರೀಮಂತರಾದರೆ ಅದು ತಪ್ಪು. ದುರಾಸೆ ಕಾರಣದಿಂದಾಗಿ ಪ್ರಾಮಾಣಿಕತೆಯೂ ಕಡಿಮೆಯಾಗಿದೆ ಎಂದರು.
ದೇಶದಲ್ಲಿ ಒಂದೊಂದು ದಶಕದಲ್ಲಿ ಒಂದೊಂದು ಹಗರಣಗಳು ನಡೆದಿದ್ದು ಪ್ರತಿ ದಶಕದಲ್ಲಿ ನಡೆದ ಹಗರಣಗಳಿಂದ ಸೋರಿಕೆಯಾದ ಹಣದಿಂದ ಸಾಕಷ್ಟು ಅಭಿವೃದ್ಧಿ ಮಾಡಬಹುದಿತ್ತು. 1985ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರೇ ಹೇಳಿದಂತೆ ಪ್ರತಿ ರೂಪಾಯಿಯಲ್ಲಿ 15 ಪೈಸೆ ಮಾತ್ರ ಅಭಿವೃದ್ಧಿ ಕೆಲಸಗಳಿಗೆ ಹೋಗುತ್ತಿದೆ ಎಂದಿದ್ದರು. ಇಂದು ನಾವು ಎಂತಹ ಪ್ರಜಾಪ್ರಭುತ್ವದಲ್ಲಿ ಇದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಹಿಂದೆ ಶಾಲೆಗಳಲ್ಲಿ ನೀತಿ ಪಾಠ ಇತ್ತು. ಆದರೆ ಇಂದು ಅದು ಇಲ್ಲವಾಗಿದೆ. ಪಾಲಕರು ಮಕ್ಕಳಿಗೆ ನೀತಿ ಪಾಠ ಹೇಳದೆ ಮೊಬೈಲ್, ಲ್ಯಾಪ್‌ಟಾಪ್‌ಗಳ ಮುಂದೆ ಕೂರುತ್ತಿದ್ದಾರೆ ಎಂದು ಹೇಳಿದರು.
ಮಕ್ಕಳಿಗೆ ಅವರ ಭವಿಷ್ಯಕ್ಕಾಗಿ ಪ್ರಾಮಾಣಿಕತೆಯ ಮೌಲ್ಯಗಳನ್ನು ಅಳವಡಿಸಬೇಕು. ದೇಶದಲ್ಲಿ ಆರ್ಥಿಕತೆಗಾಗಿ ಕ್ರಾಂತಿ ಆಗಬಹುದು. ಆದರೆ ಕ್ರಾಂತಿಗೆ ಎಂದೂ ಜಯವಾದ ಉದಾಹರಣೆ ಇಲ್ಲ. ತೃಪ್ತಿ ಮತ್ತು ಮಾನವೀಯತೆಯನ್ನು ಖರೀದಿ ಮಾಡಲು ಸಾಧ್ಯವಿಲ್ಲ ಎಂದರು.
ಜೇಸಿ ವಲಯಾಧ್ಯಕ್ಷ ವಿಜಯಕುಮಾರ್ ಮಾತನಾಡಿ, ಜೇಸಿ ಸಂಸ್ಥೆ ಯುವಜನರ ವ್ಯಕ್ತಿತ್ವ ವಿಕಸನದಲ್ಲಿ ತೊಡಗಿಕೊಂಡಿದ್ದು ಯುವಕರಿಗೆ ಅಗತ್ಯ ತರಬೇತಿಗಳನ್ನು ನೀಡುತ್ತ ಸಮಾಜದಲ್ಲಿ ಬದಲಾವಣೆಯನ್ನು ತರುತ್ತಿದೆ ಎಂದರು. ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಶಾಫಿ, ಕಾರ್ಯದರ್ಶಿಯಾಗಿ ವಿ.ಅಶೋಕ, ಲೇಡಿ ಜೇಸಿ ಅಧ್ಯಕ್ಷೆಯಾಗಿ ಫೌಜಿಯಾ ಶಾಫಿ, ಜ್ಯೂನಿಯರ್ ಜೇಸಿ ಅಧ್ಯಕ್ಷರಾಗಿ ನಿಶ್ಚಿತ್ ಹಿಲರಿ ಮಿಸ್ಕಿತ್ ಪದಗ್ರಹಣ ಸ್ವೀಕರಿಸಿದರು.
ನಿರ್ಗಮಿತ ಅಧ್ಯಕ್ಷ ಎನ್.ಶಶಿಧರ್, ಕಾರ್ಯದರ್ಶಿ ಶೃಜಿತ್ ಹುಯಿಗೆರೆ, ಜೇಸಿ ವಲಯ ಉಪಾಧ್ಯಕ್ಷ ಪ್ರಶಾಂತ್‌ಕುಮಾರ್, ಪ್ರಮುಖರಾದ ಬಿಂದು ಶಶಿಧರ್, ಅಂಕುಶ್ ಪೂಜಾರಿ, ಕಾರ್ಯಕ್ರಮ ನಿರ್ದೇಶಕ ಸಿ.ವಿ.ಸುನೀಲ್ ಮತ್ತಿತರರಿದ್ದರು.