ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಿಬಿಐಗೆ ವಹಿಸಿ, ಸುದ್ದಿಗೋಷ್ಠಿಯಲ್ಲಿ ಸಿ.ಕೆ. ಪಾಟೀಲ ಒತ್ತಾಯ

Published on

ವಿಜಯವಾಣಿ ಸುದ್ದಿಜಾಲ ಹಾವೇರಿ
ಕಳೆದ ಮಾರ್ಚ್‌ನಲ್ಲಿ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನಡೆದಿದ್ದ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯ ಬಗ್ಗೆ ಪರೀಕ್ಷಾ ಪ್ರಾಧಿಕಾರದಿಂದಲೇ ದೂರು ಬಂದಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಹಾಗೂ ಫಲಿತಾಂಶವನ್ನು ಹಿಂಪಡೆದು ಎಲ್ಲ ಹುದ್ದೆಗಳನ್ನು ಅನುಭವದ ಆಧಾರದ ಮೇಲೆ ಅತಿಥಿ ಉಪನ್ಯಾಸಕರಿಗೆ ಮೀಸಲುಗೊಳಿಸಬೇಕು ಎಂದು ರಾಜ್ಯ ಸರ್ಕಾರಿ ಪದವಿ ಕಾಲೇಜ್‌ಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಕಾರ್ಯಾಧ್ಯಕ್ಷ ಸಿ.ಕೆ. ಪಾಟೀಲ ಒತ್ತಾಯಿಸಿದರು.
ನಗರದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಪರೀಕ್ಷೆಯ ಅಕ್ರಮದ ಕುರಿತು ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯ ಅವರೇ ದೂರು ನೀಡಿದ್ದಾರೆ. ಈ ಅಕ್ರಮದ ಬಗ್ಗೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರವನ್ನು ಎಚ್ಚರಿಸಿದ್ದಾರೆ ಎಂದರು.
ಸೇವಾ ವಿಲೀನತೆಗಾಗಿ ವಿಶೇಷ ನಿಯಮಾವಳಿ ರಚಿಸಿ…
ರಾಜ್ಯದ 430 ಸರ್ಕಾರಿ ಪ್ರಥಮದರ್ಜೆ ಕಾಲೇಜ್‌ಗಳಲ್ಲಿ 2000ನೇ ಇಸವಿಯಿಂದ ಇಂದಿನವರೆಗೆ ಅತಿಥಿ ಉಪನ್ಯಾಸಕರು ಕಾಲೇಜ್ ಶಿಕ್ಷಣ ಇಲಾಖೆ ಹೊರಡಿಸುವ ನಿಯಮಗಳಿಗನುಸಾರ ಆಯ್ಕೆಯಾಗಿ ಕನಿಷ್ಠ ಗೌರವಧನ ಪಡೆದು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದೇವೆ. ರಾಜ್ಯ ಸರ್ಕಾರಿ ಪದವಿ ಕಾಲೇಜ್‌ಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಹೋರಾಟ, ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಇದರ ಪರಿಣಾಮವಾಗಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ ವರದಿಯನ್ವಯ ಜನವರಿ 2022ರಲ್ಲಿ ಅತಿಥಿ ಉಪನ್ಯಾಸಕರಿಗೆ ಕಲಾ ಮತ್ತು ವಾಣಿಜ್ಯ ವಿಭಾಗಗಳಿಗೆ 8ತಾಸು ಬೋಧನಾ ಕಾರ್ಯಭಾರ ಇರುವುದನ್ನು 15ತಾಸಿಗೆ ಹೆಚ್ಚಿಸಿ, ವಿಜ್ಞಾನ ವಿಭಾಗಕ್ಕೆ 10ತಾಸಿನ ಬದಲು 19ತಾಸಿಗೆ ಹೆಚ್ಚಿಸಿ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ನಾವು ಹೋರಾಟ ಮಾಡಿರುವುದು ಸೇವಾ ಭದ್ರತೆಗಾಗಿ ಆದರೆ ಸರ್ಕಾರ ಕೇವಲ ಕಾರ್ಯಭಾರದ ಜೊತೆ ಗೌರವಧನ ಹೆಚ್ಚಿಸಿ ಕಣ್ಮರೆಸುವ ತಂತ್ರಗಾರಿಕೆ ಮಾಡಿದೆ ಎಂದು ದೂರಿದರು.
ಅತಿಥಿ ಉಪನ್ಯಾಸಕರಿಗೆ ಯಾವುದೇ ರೀತಿಯ ರಜೆ, ಆರೋಗ್ಯ ವಿಮೆ ಸೌಲಭ್ಯ, ಮೌಲ್ಯಮಾಪನ ಸಮಯದಲ್ಲಿ ಕಾಲೇಜ್‌ಗಳಲ್ಲಿ ಸಂಭಾವನೆ ಇಲ್ಲದಿರುವುದು ಹಾಗೂ ಶೈಕ್ಷಣಿಕ ಕಾರ್ಯಾಗಾರದಲ್ಲಿ ತೊಡಗಿಸಿಕೊಳ್ಳುವುದಕ್ಕೆ(ಒಒಡಿ) ನೀಡಿಲ್ಲ. ಹೀಗೆ ಹತ್ತು ಹಲವಾರು ಸೌಲಭ್ಯಗಳಿಲ್ಲದೇ ಜೀತ ಪದ್ಧತಿಯಂತೆ ದುಡಿಸಿಕೊಳ್ಳಲಾಗುತ್ತಿದೆ. ಅತಿಥಿ ಉಪನ್ಯಾಸಕರು ಖಾಯಂ ಪ್ರಾಧ್ಯಾಪಕರ ಸರಿಸಮಾನವಾಗಿ ಎಲ್ಲಾ ರೀತಿಯ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. 2 ದಶಕಗಗಳಿಗೂ ಹೆಚ್ಚು ಕಾಲದ ಈ ಜ್ವಲಂತ ಸಮಸ್ಯೆಗೆ ಮಾನವೀಯತೆಯ ಆಧಾರದ ಮೇಲೆ ಕೂಡಲೇ ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರು ಸೇವಾ ವಿಲೀನತೆ ತೀರ್ಮಾನ ಕೈಗೊಳ್ಳಬೇಕು ಎಂದರು.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅತಿಥಿ ಉಪನ್ಯಾಸಕರನ್ನು ಸೇವಾಭದ್ರತೆ ಸೇವಾ ಸಕ್ರಮಾತಿ, ಸೇವಾ ವಿಲೀನತೆ ಪಕಿಯೆಗೆ ಕೂಡಲೇ ಒಳಪಡಿಸಬೇಕು. ಪ್ರತಿ ತರಗತಿಗಳಿಗೆ 50ರಿಂದ 60ವಿದ್ಯಾರ್ಥಿಗಳಿಗೆ ತರಗತಿಗಳನ್ನು ಸೀಮಿತಗೊಳಿಸುವ ಮೂಲಕ ಗುಣಾತ್ಮಕ ಶಿಕ್ಷಣವನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ವಸಂತಗೌಡ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net