ಪ್ರಮಾಣಪತ್ರ ಸಂಖ್ಯೆ ನಿಯಮ ಸಡಿಲ; ವಿಜಯವಾಣಿ ವಿಶೇಷ ವರದಿಯಿಂದ ಎಚ್ಚೆತ್ತ ಶಿಕ್ಷಣ ಇಲಾಖೆ

Vv Impact
Published on

ಬೆಂಗಳೂರು: ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವ ವೇಳೆ ಪ್ರಮಾಣ ಪತ್ರ ಸಂಖ್ಯೆ ನಮೂದಿಸಬೇಕೆಂಬ ನಿಯಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಸಡಿಲಗೊಳಿಸಿದ್ದು, ಅಭ್ಯರ್ಥಿಗಳು ನಿರಾಳರಾಗಿದ್ದಾರೆ. ‘ಶಿಕ್ಷಕರಾಗಲೂ ನಾನಾ ತೊಡಕು!’ ಶೀರ್ಷಿಕೆಯಡಿ ಶುಕ್ರವಾರ ವಿಜಯವಾಣಿಯಲ್ಲಿ ಪ್ರಕಟವಾದ ವರದಿಯಿಂದ ಎಚ್ಚೆತ್ತು ಕೊಂಡಿರುವ ಶಿಕ್ಷಣ ಇಲಾಖೆ, ಕೇಂದ್ರೀಕೃತ ದಾಖಲಾತಿ ಘಟಕದಿಂದ ಶಿಕ್ಷಕರ ನೇಮಕಾತಿಗಾಗಿ ಆನ್​ಲೈನ್ ಅರ್ಜಿಯಲ್ಲಿನ ನಿಗದಿತ ಅಂಕಣದಲ್ಲಿ ಪದವಿ ಉತ್ತೀರ್ಣ ಪ್ರಮಾಣಪತ್ರದ ಸಂಖ್ಯೆಯನ್ನು ಅಭ್ಯರ್ಥಿಯು ನಮೂದಿಸುವಂತೆ ಕಡ್ಡಾಯಗೊಳಿಸಿರುವುದನ್ನು ಸಡಿಲ ಗೊಳಿಸಲಾಗಿದೆ. ಅಭ್ಯರ್ಥಿಯು ತನ್ನ ಪ್ರಮಾಣ ಪತ್ರದಲ್ಲಿ ಪ್ರಮಾಣಪತ್ರದ ಸಂಖ್ಯೆ ಮುದ್ರಿತವಾಗಿದ್ದಲ್ಲಿ ಮಾತ್ರ ನಮೂದಿ ಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಿದೆ.

ವೆಬ್​ಸೈಟ್​ನಲ್ಲಿ ಮಾಹಿತಿ: ಕನ್ನಡ ಮಾಧ್ಯಮ, ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರಗಳನ್ನು ಅಭ್ಯರ್ಥಿಯು ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವ ದಿನಾಂಕದೊಳಗೆ ಪಡೆದುಕೊಂಡಿರಬೇಕು. ಈಗ ಹೊಸದಾಗಿ ಮಾಡಿಸಬೇಕೆಂದಲ್ಲ. ಅಭ್ಯರ್ಥಿಗಳು ಪ್ರಮಾಣ ಪತ್ರಗಳನ್ನು 500 ಕೆ.ಬಿ ಗಾತ್ರದವರೆಗೆ ಸ್ಕಾ್ಯನ್ ಮಾಡಿ ಅಪ್​ಲೋಡ್ ಮಾಡಿದಲ್ಲಿ ತಂತ್ರಾಂಶದಲ್ಲಿ ನಮೂದಾಗುತ್ತದೆ.

ಜಾತಿ ಮತ್ತು ಆದಾಯ ಪ್ರಮಾಣ ಪತ್ರ: ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ವಿವರಗಳನ್ನು ವೆಬ್​ಸರ್ವೀಸ್ ತಂತ್ರಾಶದ ಮೂಲಕ ಆರ್​ಡಿ ನಂಬರ್ ಶಿಕ್ಷಕರ ನೇಮಕಾತಿ ಆನ್​ಲೈನ್ ಅರ್ಜಿಗೆ ನಮೂದಿಸಿದ ಕೂಡಲೆ ಕಂದಾಯ ಇಲಾಖೆಯ ತಂತ್ರಾಶದಿಂದ ಪ್ರಮಾಣ ಪತ್ರದಲ್ಲಿನ ಅಭ್ಯರ್ಥಿಯ ಪ್ರವರ್ಗ/ಜಾತಿ ವಿವರಗಳು ಆನ್​ಲೈನ್ ನಮೂದಾಗುತ್ತವೆ. ಅಭ್ಯರ್ಥಿಯು ಆರ್.ಡಿ ನಂಬರ್ ಹೊಂದಿದ ಪ್ರಮಾಣ ಪತ್ರ ಪಡೆದಿದ್ದಾನೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಏ.5ರಿಂದ ಕಂದಾಯ ಇಲಾಖೆಯ ತಂತ್ರಾಶವು ಸರ್ವೀಸ್​ನಲ್ಲಿದ್ದುದ್ದರಿಂದ ಆನ್​ಲೈನ್ ಅರ್ಜಿಯಲ್ಲಿ ಆರ್.ಡಿ ನಂಬರ್ ನಮೂದಿಸಿದ ಕೂಡಲೇ ಇನ್​ವ್ಯಾಲಿಡ್ ಎಂದು ಪರದೆಯ ಮೇಲೆ ಬಿತ್ತರವಾಗುತ್ತಿತ್ತು. ಹೀಗಾಗಿ ಅಭ್ಯರ್ಥಿಗಳಿಗೆ ಅನುಕೂಲವಾಗಿಸಲು ಆನ್​ಲೈನ್ ಅರ್ಜಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್.ಡಿ ನಂಬರ್, ಪ್ರವರ್ಗ ಅಥವಾ ಜಾತಿ ವಿವರಗಳನ್ನು ಅಭ್ಯರ್ಥಿಯೇ ನಮೂದಿಸಲು ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net