

ಕೊಪ್ಪ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡುವುದು ಬಿಟ್ಟು ಆರೋಪ ಪ್ರತ್ಯಾರೋಪ ಮಾಡುವುದರಲ್ಲಿ ಸಮಯ ಕಳೆಯುತ್ತಿದ್ದಾರೆಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ ಎಸ್. ಶೆಟ್ಟಿ ಆರೋಪಿಸಿದರು.
ರಸ್ತೆ ದುರಸ್ತಿಗೆ ಆಗ್ರಹಿಸಿ ಜೆಡಿಎಸ್ ಬುಧವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಶಾಸಕರು ಅಭಿವೃದ್ಧಿ ಬಗ್ಗೆ ಯೋಚನೆ ಮಾಡುತ್ತಿಲ್ಲ. ರಸ್ತೆ ಡಾಂಬರೀಕರಣಕ್ಕೆ ಕ್ರಮ ವಹಿಸದಿದ್ದರೆ ಕೊಪ್ಪ ಬಂದ್ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.
ಗುಂಡಿ ತಪ್ಪಿಸಲು ಹೋಗಿ ಅಪಘಾತ ನಡೆಯುವುದು ನಿರಂತರವಾಗುತ್ತಿದೆ. ಇತ್ತ ಶಾಸಕರು ಬಿಜೆಪಿ ಮುಖಂಡರ ವಿರುದ್ಧ ಮಾತನಾಡುವುದೇ ಅಭಿವೃದ್ಧಿ ಎಂದು ಭಾವಿಸಿದಂತಿದೆ. ಮಾತೆತ್ತಿದರೆ 50 ಕೋಟಿ, 100 ಕೋಟಿ ರೂ. ಅನುದಾನ ಬಂದಿದೆ ಎನ್ನುತ್ತೀರಿ. ಎಲ್ಲಿ ಅಭಿವೃದ್ಧಿಯಾಗಿದೆ ಎಂದು ಪ್ರಶ್ನಿಸಿದರು.
ಕೊಪ್ಪಕ್ಕೆ ಕಾಯಕಲ್ಪ ಬೇಕು. ಕುಡಿಯುವ ನೀರು, ಕಸ ವಿಲೇವಾರಿ ಅಧೋಗತಿಯಾಗಿದೆ. ಈ ಪ್ರತಿಭಟನೆ ಕಣ್ಣು ತೆರೆಸುವ ಕೆಲಸವಾಗಿದೆ. ಕಾಂಗ್ರೆಸ್ ಮುಖಂಡರು ನೇರವಾಗಿ ಪಿಎಂ ನರೇಂದ್ರ ಮೋದಿ, ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೈಯುವ ಕೆಲಸ ಮಾಡುತ್ತಿದ್ದೀರಿ. ಸ್ಥಳೀಯ ಸಮಸ್ಯೆ ಬಗ್ಗೆ ಮಾತನಾಡುತ್ತಿಲ್ಲ ಎಂದು ದೂರಿದರು.
ಶೃಂಗೇರಿ ಕ್ಷೇತ್ರ ಜೆಡಿಎಸ್ ಘಟಕದ ಅಧ್ಯಕ್ಷ ದಿವಾಕರ್ ಭಟ್ ಮಾತನಾಡಿ, ಸುಧಾಕರ ಶೆಟ್ಟಿ ಸ್ವಂತ ಹಣದಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ರಸ್ತೆ ದುರಸ್ತಿ ಬಗ್ಗೆ ಐಟಿ ಬಿಟಿಯವರು ಕೇಳಿದರೆ ನೀವೇ ದುರಸ್ತಿ ಮಾಡಿಕೊಳ್ಳಿ ಎಂದು ಉಪಮುಖ್ಯಮಂತ್ರಿ ಹೇಳಿದ್ದಾರೆ. ಈ ರೀತಿ ದುಸ್ಥಿತಿ ಬಂದಿದೆ ಎಂದರೆ ಅಸಮರ್ಥ ಸರ್ಕಾರ ಇದೆ ಎಂದರ್ಥ ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಹೆಸರಲ್ಲಿ ಒಂದು ಕಡೆ ಕೊಟ್ಟು ಇನ್ನೊಂದು ಕಡೆ ವಾಪಸ್ ಪಡೆಯುತ್ತೀರಿ. ಈ ಭಾಗದಲ್ಲಿ ರಸ್ತೆ ಸರಿ ಇಲ್ಲ ಎಂದು ನಿಮ್ಮ ನಾಯಕರಿಗೆ, ಶಾಸಕರಿಗೆ ಹೇಳುವ ಧೈರ್ಯ ಇಲ್ಲಿನ ಮುಖಂಡರಿಗೆ ಇಲ್ಲವೇ? ಲೀಸ್‌ಗೆ ಜಮೀನು ಕೊಡುವುದರಿಂದ ಮಧ್ಯಮ, ಸಣ್ಣ ರೈತರಿಗೆ ಯಾವುದೇ ಲಾಭವಿಲ್ಲ, ದೊಡ್ಡ ಜಮೀನುದಾರರಿಗೆ ಮಾತ್ರ ಲಾಭ ಎಂದು ಹೇಳಿದರು.
ತಾಲೂಕು ಜೆಡಿಎಸ್ ಉಪಾಧ್ಯಕ್ಷ ವಾಸಪ್ಪ ಕುಂಚೂರು ಮಾತನಾಡಿ, ರಾಜ್ಯ ಸರ್ಕಾರಕ್ಕೆ ಈ ಮೂಲಕ ಎಚ್ಚರಿಕೆ ಕೊಡುತ್ತಿದ್ದೇವೆ. ಜನ ಅಧಿಕಾರ ಕೊಟ್ಟರೂ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಬಸ್ ನಿಲ್ದಾಣ ಜಾನುವಾರು ಕೊಟ್ಟಿಗೆಯಂತಾಗಿದೆ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕಗ್ಗಾ ರಾಮಸ್ವಾಮಿ, ಕಾರ್ಯದರ್ಶಿ ಶಾಂತಕುಮಾರ್ ಜೈನ್, ಮುಖಂಡರಾದ ಪೂರ್ಣೇಶ್, ಚಂದ್ರಶೇಖರ್, ರವೀಂದ್ರ, ಉದಯ್ ಸುವರ್ಣ, ಸತೀಶ್ ಮತ್ತಿತರರಿದ್ದರು.