

ನಗರದ ಉದಯಗಿರಿಯಲ್ಲಿ ಇತ್ತೀಚೆಗೆ ನಡೆದ ಕಲ್ಲುತೂರಾಟ ಪ್ರಕರಣ ಸಂಬಂಧ ಪ್ರಚೋದನೆ ನೀಡಿದ ಮೌಲ್ವಿಯನ್ನು ಮೊದಲು ಗಡಿಪಾರು ಮಾಡಬೇಕು. ಅದನ್ನು ಬಿಟ್ಟು ಸತೀಶ್ ಅವರನ್ನು ಗಡಿಪಾರು ಮಾಡಿದರೆ ನಾವು ಸಹಿಸುವುದಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಪೂರ್ವ ನಿಯೋಜಿತ ಪ್ರಕರಣ. ಇದಕ್ಕೆ ಕಾಂಗ್ರೆಸ್ ಕುಮ್ಮಕ್ಕು ನೀಡಿದೆ. ಗೂಂಡಾ ಪ್ರವೃತ್ತಿಯ ಕಿಡಿಗೆಡಿಗಳ ಕೃತ್ಯಕ್ಕೆ ಕಾಂಗ್ರೆಸ್ ಕಾರಣವಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಘಟನೆಗಳ ನಂತರ ಮೈಸೂರಿನಲ್ಲಿ ಇಂಥ ಘಟನೆ ನಡೆದಿದೆ. ತಮ್ಮ ಏರಿಯಾದದಲ್ಲಿ ವಾಸವಿರುವ ಹಿಂದುಗಳನ್ನು ಓಡಿಸುವುದು, ಕಳ್ಳದಂಧೆ, ಕಾನೂನು ಬಾಹಿರ ಕಾರ್ಯ ನಡೆಸುವ ಹಾಗೂ ಪೊಲೀಸರಿಗೆ ಭಯ ಹುಟ್ಟಿಸುವ ಕೆಲಸ ಮಾಡಲು ವಾತಾವರಣ ಕಲ್ಪಿಸಿಕೊಳ್ಳುವುದು ಒಂದು ವರ್ಗದಿಂದ ನಡೆಯುತ್ತಿದೆ ಎಂದು ಅವರು ದೂರಿದರು.
ಆ ವರ್ಗ ಸೆಕ್ಸ್ ಸ್ಕ್ಯಾಂಡಲ್, ಡ್ರಗ್ ಮಾಫಿಯಾ, ಗಾಂಜಾ, ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ಅಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡುತ್ತಿದೆ. ಉದಯಗಿರಿಯಲ್ಲಿ ಕಾನೂನು ಇಲ್ಲವೆ? ಕಾನೂನು ಆ ವರ್ಗದ ಜನರಿಗೆ ಅನ್ವಯಿ ಸುವುವುದಿಲ್ಲವೇ?. ಅವರು ಏನು ಮಾಡಿದರೂ ಕಾಂಗ್ರೆಸ್ಸಿಗರು ಅವರ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳುತ್ತಾರೆಂದು ಅವರಿಗೆ ಗೊತ್ತಿದೆ. ಹೀಗಾಗಿ ಈ ರೀತಿ ಗೂಂಡಾಗಿರಿ ನಡೆಸುತ್ತಿದ್ದಾರೆ ಎಂದು ಮುತಾಲಿಕ್ ಕಿಡಿ ಕಾರಿದರು.