

ಎನ್.ಆರ್.ಪುರ: ಪ್ರಪಂಚದಲ್ಲಿ ಪೋಲಿಯೊ ನಿರ್ಮೂಲನೆಯಾಗಲು ರೋಟರಿ ಸಂಸ್ಥೆಯ ಪಾತ್ರ ಹಿರಿದು ಎಂದು ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ಸಿ.ಎ.ದೇವಾನಂದ್ ಹೇಳಿದರು.
ಸುಂಕದಕಟ್ಟೆಯ ಎಸ್.ಎನ್.ಸಮುದಾಯ ಭವನದಲ್ಲಿ ರೋಟರಿ ಸಂಸ್ಥೆಗೆ ಅಧಿಕೃತ ಭೇಟಿ ಸಮಾರಂಭದಲ್ಲಿ ಮಾತನಾಡಿ, ರೋಟರಿ ಸಂಸ್ಥೆ 1975ರಿಂದ ಕೈಗೊಂಡ ಪ್ರಯತ್ನದಿಂದ ಪ್ರಸ್ತುತ ಶೇ. 99.99 ರಷ್ಟು ಪೋಲಿಯೊ ನಿರ್ಮೂಲನೆಯಾಗಿದೆ. ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆ ಸೌಲಭ್ಯ ಒದಗಿಸಲಾಗಿದೆ. ಎಲ್ಲ ಸದಸ್ಯರನ್ನು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಹೆಚ್ಚು ಸೇವಾ ಕಾರ್ಯಗಳನ್ನು ಮಾಡಬೇಕಾಗಿದೆ. ರೋಟರಿ ಜಿಲ್ಲಾ ಕಾರ್ಯಕ್ರಮಗಳಾದ ಆರೋಗ್ಯ ಮತ್ತು ಸ್ವಚ್ಛತೆ ಜಾಗೃತಿ, ಶಿಕ್ಷಣ ಮತ್ತು ಕಾನೂನು ಅರಿವು ಕಾರ್ಯಕ್ರಮಗಳನ್ನು ಎನ್.ಆರ್.ಪುರ ರೋಟರಿ ಸಂಸ್ಥೆ ಮಾಡಿರುವುದು ಶ್ಲಾಘನೀಯವಾಗಿದೆ ಎಂದರು.
ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಎಚ್.ಎಸ್.ನಟೇಶ್ ಮಾತನಾಡಿ, ರೋಟರಿ ಸಂಸ್ಥೆ ಬೆಳೆಯಲು ಹೊಸ ಸದಸ್ಯರ ಸೇರ್ಪಡೆ ಅವಶ್ಯಕ. ರೋಟರಿ ಸಂಸ್ಥೆಯಿಂದ ಸಮಾಜಮುಖಿ ಕೆಲಸ ಮಾಡಿದವರನ್ನು ಗುರುತಿಸುವ ಕೆಲಸ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.
ರೋಟರಿ ಸಂಸ್ಥೆಯ ವಲಯ ಲೆಫ್ಟಿನೆಂಟ್ ಎಚ್.ವಿ.ಮಂಜುನಾಥ್ ಮಾತನಾಡಿ, ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಕ್ರಿಯಾ ಯೋಜನೆ ರೂಪಿಸಿಕೊಂಡು ಅದರಂತೆ ಕಾರ್ಯ ಪ್ರವೃತ್ತರಾದರೆ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕಟ್ಟಿನಮನೆ ಗ್ರಾಮದ ಶಿಕ್ಷಣ ಪ್ರೇಮಿ ಶಂಕರನಾರಾಯಣ ಹೆಬ್ಬಾರ್ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಗುರುತಿಸಿ ಸನ್ಮಾನಿಸಲಾಯಿತು. ಸಭೆಯಲ್ಲಿ ಎನ್.ಆರ್.ಪುರ ರೋಟರಿ ಸಂಸ್ಥೆ ಅಧ್ಯಕ್ಷ ಜಿ.ಆರ್.ದಿವಾಕರ್,
ರೇಖಾ ದೇವಾನಂದ್ , ರೋಟರಿ ಕಾರ್ಯದರ್ಶಿ ಮಧು ವೆಂಕಟೇಶ್, ಖಜಾಂಚಿ ಅಭಿಷೇಕ್, ಪಿ.ಕೆ.ಬಸವರಾಜಪ್ಪ, ಚೇತನಾ ಅಭಿಷೇಕ್, ಬಿ.ಟಿ.ವಿಜಯಕುಮಾರ್, ವಿದ್ಯಾನಂದಕುಮಾರ್, ಕೆ.ಎಸ್.ರಾಜಕುಮಾರ್ ಇದ್ದರು. ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.