ಪೊಲೀಸ್ ಹುತಾತ್ಮರ ದಿನಾಚರಣೆ / ಜಿಲ್ಲೆಯ ಗಣ್ಯರಿಂದ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಅರ್ಪಣೆ / ಶಾಂತಿ ಸುವ್ಯವಸ್ತೆ ಕಾಪಾಡುವಲ್ಲಿ ಪೋಲಿಸರ ಪಾತ್ರ ಮಹತ್ವವಾದದ್ದು / ಜಿಲ್ಲಾಧಿಕಾರಿ ಅಕ್ರಂಪಾಷ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಪ್ರತಿದಿನ ಪೋಲಿಸರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೂ ಸಹ ಸಮಾಜದಲ್ಲಿ ಶಾಂತಿ ಸುವ್ಯವಸ್ತೆ ಕಾಪಾಸುವಲ್ಲಿ ಪೋಲಿಸರ ಪಾತ್ರ ಬಹಳ ಮಹತ್ವದ್ದಾಗಿದೆ. ಜಿಲ್ಲೆಯ ಪೋಲಿಸ್ ಸಿಬ್ಬಂದಿಗಾಗಿ ಇಲಾಖೆಯಿಂದ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು.

ನಗರದ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ನಿಮಿತ್ತ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಅರ್ಪಿಸಿ, ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ, ಪ್ರತಿ ವರ್ಷ ಅಕ್ಟೋಬರ್ ೨೧ ರಂದು ಪೊಲೀಸ್ ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ. ಆ ಮೂಲಕ ಅವರ ತ್ಯಾಗ ನೆನೆಯಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ. ನಿಖಿಲ್ ಮಾತನಾಡಿ, ೧೯೫೯ರಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಎಸ್‌ಐ ಕರಂ ಸಿಂಗ್ ನೇತೃತ್ವದ ತಂಡ ಕೇವಲ ರೈಫಲ್‌ನೊಂದಿಗೆ ಲಡಾಖ್‌ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿತ್ತು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಚೀನಾ ಪಡೆ ಭಾರತೀಯ ಪೊಲೀಸರ ಮೇಲೆ ಏಕಾಏಕಿ ದಾಳಿ ನಡೆಸಿದಾಗ ವೀರಾವೇಷದಿಂದ ಹೋರಾಡಿ ಪ್ರಾಣಾರ್ಪಣೆ ಮಾಡಿದರು.

ಇವರ ಪ್ರಾಣತ್ಯಾಗದ ನೆನಪಿನಲ್ಲಿ ರಾಷ್ಟ್ರಾದ್ಯಂತ ಅಕ್ಟೋಬರ್ ೨೧ರಂದು ಪೊಲೀಸ್ ಹುತಾತ್ಮರ ದಿನವನ್ನು ಆಚರಿಸಲಾಗುತ್ತಿದೆ. ಕರ್ತವ್ಯನಿರತ ಪೊಲೀಸರು ಪ್ರಾಣ ತ್ಯಾಗ ಮಾಡಿದ ಅಧಿಕಾರಿ, ಸಿಬ್ಬಂದಿಯನ್ನು ಗೌರವ ಪೂರ್ವಕವಾಗಿ ಸ್ಮರಿಸಲಾಗುತ್ತದೆ. ಲಡಾಖ್ ನಲ್ಲಿ ೧೬ ಸಾವಿರ ಅಡಿ ಎತ್ತರ ಪ್ರದೇಶದಲ್ಲಿ ಹುತಾತ್ಮರ ಸ್ಮಾರಕ ನಿರ್ಮಿಸಲಾಗಿದೆ. ಈ ವರ್ಷದಲ್ಲಿ ದೇಶದಲ್ಲಿ ೨೧೬ ಪೊಲೀಸರು ಕರ್ತವ್ಯದಲ್ಲಿದ್ದಾಗ ಹುತಾತ್ಮರಾಗಿದ್ದಾರೆ. ಕರ್ನಾಟಕದಲ್ಲಿ ೦೫ ಪೊಲೀಸರು ಕರ್ತವ್ಯದಲ್ಲಿದ್ದಾಗ ಕೊನೆಯುಸಿರೆಳೆದಿದ್ದಾರೆ. ಇವರೆಲ್ಲರ ತ್ಯಾಗವನ್ನು ಸ್ಮರಿಸುವ ಮೂಲಕ ಗೌರವ ಸಮರ್ಪಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಂಗಳ, ಅಪರ ಪೊಲೀಸ್ ವರಿಷ್ಟಾಧಿಕಾರಿಗಳಾದ ರವಿಶಂಕರ್, ಜಗದೀಶ್, ಕೊಚಿಮುಲ್ ಒಕ್ಕೂಟದ ನಿರ್ದೇಶಕ ಅನಿಫ್, ಪೊಲೀಸ್ ಉಪ ಅಧಿಕ್ಷಕರಾದ ಹೆಚ್. ಎಂ ನಾಗ್ತೇ, ನಂದಕುಮಾರ್, ಮಂಜುನಾಥ್, ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು, ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

ಚಿತ್ರ ೨೧ ಕೆ.ಎಲ್.ಆರ್. ೦೩ : ಪೋಲಿಸ್ ಹುತಾತ್ಮರ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಅಕ್ರಂಪಾಷ, ಎಸ್.ಪಿ.ಬಿ.ನಿಖಿಲ್, ಅಪರಜಿಲ್ಲಾಧಿಕಾರಿ ಮಂಗಳ, ಅಪರ ಪೋಲಿಸ್ ವರಿಷ್ಠಾಧಿಕಾರಿಗಳಾದ ರವಿಶಂಕರ್, ಜಗದೀಶ್ ಮುಂತಾದವರು ಧ್ವಜ ವಂದನೆ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net