

ಬೆಂಗಳೂರು : ಡಾರ್ಕ್ ನೆಟ್‌ನಲ್ಲಿ ಡ್ರಗ್ಸ್ ಮಾಫಿಯಾದಲ್ಲಿ ತೊಡಗಿದ್ದ ಗಣ್ಯ ಮಕ್ಕಳಿಗೆ ಸಹಕರಿಸಿದ್ದ ಆರೋಪದ ಮೇಲೆ ಸದಾಶಿವನಗರ ಠಾಣೆ ಮುಖ್ಯಪೇದೆ ಪ್ರಭಾಕರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿದೇಶದಿಂದ ಡಾರ್ಕ್‌ನೆಟ್ ಮೂಲಕ ಪೆಡ್ಲರ್‌ಗಳು ಪಾರ್ಸೆಲ್‌ನಲ್ಲಿ ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು. ಚಾಮರಾಜಪೇಟೆ ಅಂಚೆ ಕಚೇರಿಯಲ್ಲಿ ಪಾರ್ಸೆಲ್ ಸ್ವೀಕರಿಸಲು ಮತ್ತು ಗ್ರಾಹಕರಿಗೆ ತಲುಪಿಸುವ ಹಂತದಲ್ಲಿ ಪೆಡ್ಲರ್‌ಗಳಿಗೆ ಪ್ರಭಾಕರ್ ತಾಂತ್ರಿಕ ನೆರವು ನೀಡುತ್ತಿದ್ದ. ಪ್ರತಿಯಾಗಿ ಮುಖ್ಯಪೇದೆಗೆ ಹಣ ನೀಡುತ್ತಿದ್ದರು ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲಿ ಬಂಧಿತ ಪೆಡ್ಲರ್‌ಗಳಾದ ಸುನೀಷ್ ಹೆಗ್ಡೆ, ಹೇಮಂತ್ ಮುದ್ದಪ್ಪ, ಸುಜಯ್, ಪ್ರಸಿದ್ಧ ಶೆಟ್ಟಿ ಮತ್ತು ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ನೆಲೆಸಿದ್ದಾರೆ. ಕೆಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಉಡುಗೊರೆ ಕೊಟ್ಟು ವಿಶ್ವಾಸ ಗಳಿಸಿದ್ದರು. ಅದೇ ರೀತಿ ಪ್ರಭಾಕರ್‌ಗೆ ಗಾಳ ಹಾಕಿ ಬೀಳಿಸಿದ್ದರು. ಡಾರ್ಕ್‌ನೆಟ್ ವೆಬ್‌ಸೈಟ್‌ನಲ್ಲಿ ವಿದೇಶದಿಂದ ಹೈಡ್ರೋ ಗಾಂಜಾ ಸೇರಿ ಇತರೆ ಡ್ರಗ್ಸ್‌ಗಳನ್ನು ಆರೋಪಿಗಳು ಸುಳ್ಳು ವಿಳಾಸ ಕೊಟ್ಟು ಖರೀದಿಸುತ್ತಿದ್ದರು.
ಆ ಡ್ರಗ್ಸ್ ಚಾಮರಾಜಪೇಟೆ ಅಂಚೆ ಕಚೇರಿಗೆ ತಲುಪುತ್ತಿತ್ತು. ಪಾರ್ಸೆಲ್ ಸ್ವೀಕರಿಸುವಾಗ ಯಾರಿಗೂ ಅನುಮಾನ ಬಾರದಂತೆ ಆರೋಪಿಗಳು ಎಚ್ಚರಿಕೆ ವಹಿಸಿದ್ದರು. ಪಾರ್ಸಲ್ ನೀಡಲು ಬರುವ ಅಂಚೆ ನೌಕರನ ಮೊಬೈಲ್ ನಂಬರ್ ಪಡೆದು ಪ್ರಭಾಕರ್‌ಗೆ ಕೊಡುತ್ತಿದ್ದರು. ಡ್ರಗ್ಸ್ ಪಾರ್ಸಲ್ ಬಂದ ದಿನ ಅಂಚೆ ನೌಕರ ಎಲ್ಲಿದ್ದಾನೆ ಎಂಬ ಮಾಹಿತಿಯನ್ನು ಪೆಡ್ಲರ್‌ಗಳಿಗೆ ಪ್ರಭಾಕರ್ ನೀಡುತ್ತಿದ್ದನು. ಅಂಚೆ ನೌಕರ ಪಾರ್ಸೆಲ್ ತರುತ್ತಿದನ್ನು ಖಚಿತ ಪಡಿಸಿಕೊಂಡು ದಾರಿ ನಡುವೆಯೇ ಭೇಟಿ ಮಾಡಿ ಪಾರ್ಸೆಲ್ ಪಡೆಯುತ್ತಿದ್ದರು. ಅದೇ ರೀತಿ ಗ್ರಾಹಕರ ಟವರ್ ಲೋಕೇಷನ್ ಸಹ ಪಡೆಯುತ್ತಿದ್ದರು. ಹೀಗೆ ಒಬ್ಬರ ಟವರ್ ಲೋಕೇಷನ್ ಕಳುಹಿಸಿದರೆ ಪ್ರತಿಯಾಗಿ ಮುಖ್ಯಪೇದೆಗೆ 5 ಸಾವಿರ ರೂ.ಗಳನ್ನು ಡ್ರಗ್ಸ್ ದಂಧೆಕೋರರು ಕೊಡುತ್ತಿದ್ದರು.
ಗೋವಾದಲ್ಲಿ ದರ್ಶನ್, ಸುನೀಷ್, ಹೇಮಂತ್ ಬಂಧಿತರಾಗಿದ್ದರು. ಆರೋಪಿಗಳ ವಿಚಾರಣೆ ವೇಳೆ ಪ್ರಭಾಕರ್ ನೆರವಿನ ಸಂಗತಿ ಬೆಳಕಿಗೆ ಬಂದಿತ್ತು. ಕೂಡಲೇ ಆತನನ್ನು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಆದೇಶಿಸಿದ್ದರು. ಮೊದಲು ಆರೋಪಿಗಳ ಪರಾರಿ ವೇಳೆ ಸಹಕರಿಸಿದ್ದಾನೆ ಎಂಬ ಅನುಮಾನವಿತ್ತು. ಆರೋಪಿಗಳ ವಾಟ್ಸ್‌ಆ್ಯಪ್ ಸಂದೇಶಗಳನ್ನು ಪರಿಶೀಲಿಸಿದಾಗ ಪೆಡ್ಲರ್‌ಗಳಿಗೂ ಪ್ರಭಾಕರ್ ಸಾಥ್ ಕೊಟ್ಟಿರುವ ಮಾಹಿತಿ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯಲ್ಲಿ ತಾಂತ್ರಿಕ ತರಬೇತಿ
ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಚಲನವಲನದ ಪತ್ತೆಗೆ ಟವರ್ ಲೋಕೇಷನ್ ಪಡೆಯಲು ಠಾಣಾಧಿಕಾರಿಗಳಿಗೆ ಮೊಬೈಲ್ ಸೇವಾ ಕಂಪನಿಗಳು ಅವಕಾಶ ನೀಡಿವೆ. ಈ ತಾಂತ್ರಿಕ ಕೆಲಸಕ್ಕೆ ಪರಿಣಿತ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಆಯ್ದ ಸಿಬ್ಬಂದಿಗೆ ವಿಶೇಷ ತರಬೇತಿ ಕೊಡಿಸಲಾಗುತ್ತದೆ. ದೆಹಲಿ ಮಟ್ಟದಲ್ಲಿ ಪ್ರಭಾಕರ್ ತಾಂತ್ರಿಕ ತರಬೇತಿ ಪಡೆದಿದ್ದ. 2007ರಲ್ಲಿ ಇಲಾಖೆಗೆ ಸೇರಿದ್ದ ಪ್ರಭಾಕರ್, ಎಸ್.ಜೆ. ಪಾರ್ಕ್ ಆನಂತರ ಸದಾಶಿವನಗರ ಠಾಣೆಯಲ್ಲಿ 1 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದ.
1 ವರ್ಷದಿಂದ ಸಂಪರ್ಕ
ಬಂಧಿತ ಆರೋಪಿಗಳಾದ ಸುನೀಷ್ ಹೆಗ್ಡೆ, ಹೇಮಂತ್ ಮುದ್ದಪ್ಪ ಹಾಗೂ ಪ್ರಸಿದ್ಧ ಶೆಟ್ಟಿ ವಿಚಾರಣೆ ವೇಳೆ ಪ್ರಭಾಕರ್ ಪಾತ್ರದ ಕುರಿತು ಬಹಿರಂಗವಾಗಿದೆ. ಮೊಬೈಲ್ ಕರೆಗಳ ವಿವರ ಮತು ್ತವಾಟ್ಸ್‌ಆ್ಯಪ್ ಸಂದೇಶ ಪರಿಶೀಲಿಸಿದಾಗ ಪ್ರಭಾಕರ್ ಸಂವಹನ ಕುರಿತು ಮತ್ತಷ್ಟು ವಿವರ ಲಭ್ಯವಾಯಿತು. ಒಂದು ವರ್ಷದಿಂದ ಆರೋಪಿಗಳಿಗೆ ನಿರಂತರವಾಗಿ ಕಾನೂನುಬಾಹಿರವಾಗಿ ಟವರ್ ಲೋಕೇಷನ್ ಶೇರ್ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.