ಪುರಿ ಕಾರಿಡಾರ್ ವಿವಾದದ ಸುತ್ತ...

Puri
Published on

ಒಡಿಶಾದ ಐತಿಹಾಸಿಕ ಸುಪ್ರಸಿದ್ಧ ಪುರಿ ಜಗನ್ನಾಥ ಮಂದಿರ ಪರಿಸರದಲ್ಲಿ ರಾಜ್ಯ ಸರ್ಕಾರವು ಪಾರಂಪರಿಕ ಕಾರಿಡಾರ್ ಯೋಜನೆ ರೂಪಿಸಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಮುಂದಾಗಿದೆ. ಈ ಪ್ರಾಚೀನ ದೇವಾಲಯದ ನಿಷೇಧಿತ ಪ್ರದೇಶ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೊಳ್ಳುತ್ತಿರುವುದಕ್ಕೆ ಪುರಾತತ್ವ ಸರ್ವೆಕ್ಷಣಾ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ.

ಬಿಜು ಜನತಾದಳ (ಬಿಜೆಡಿ) ನೇತೃತ್ವದ ಒಡಿಶಾ ಸರ್ಕಾರದ ಮಹತ್ವಾಕಾಂಕ್ಷೆಯ ಪುರಿ ಪಾರಂಪರಿಕ ಕಾರಿಡಾರ್ ಯೋಜನೆ ಕೈಗೆತ್ತಿಕೊಂಡಿದೆ. ಆದರೆ, ಈ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆಯು ಒಡಿಶಾ ಹೈಕೋರ್ಟ್​ನಲ್ಲಿ ಪ್ರಮಾಣಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ವಿವಾದ ಹುಟ್ಟಿಕೊಂಡಿದೆ. ಈ ಕಾರಿಡಾರ್ ಯೋಜನೆಯು 2016ರಲ್ಲಿ ಚಿಂತನೆಗೊಂಡು, 2019ರ ಡಿಸೆಂಬರ್​ನಲ್ಲಿ ಸ್ಪಷ್ಟ ರೂಪ ಪಡೆದುಕೊಂಡಿತು. ಪುರಿ ಪಟ್ಟಣವನ್ನು ಅಂತಾರಾಷ್ಟ್ರೀಯ ಪಾರಂಪರಿಕ ತಾಣವನ್ನಾಗಿ ರೂಪಿಸುವ ಉದ್ದೇಶದ ಯೋಜನೆ ಇದು. ಪಟ್ಟಣದ ಪ್ರಮುಖ ಭಾಗಗಳನ್ನು ಮತ್ತು ಪ್ರವಾಸಿಗರಿಗಾಗಿ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳನ್ನು ಅಭಿವೃದ್ಧಿ ಮಾಡುವುದನ್ನು ಯೋಜನೆ ಒಳಗೊಂಡಿದೆ. ಅಂದಾಜು 800 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ ಪ್ರಾರಂಭಿಸಲು ರಾಜ್ಯ ವಿಧಾನಸಭೆಯಲ್ಲಿ 2020ರ ಫೆಬ್ರವರಿಯಲ್ಲಿ ನಿರ್ಣಯವೊಂದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ನಂತರ ಶ್ರೀ ಜಗನ್ನಾಥ ದೇವಾಲಯದ ಆಡಳಿತವು (ಎಸ್​ಜೆಟಿಎ) 3,200 ಕೋಟಿ ರೂ.ಗಳ ಅಂದಾಜು ವೆಚ್ಚದ ವಾಸ್ತುಶಿಲ್ಪ ವಿನ್ಯಾಸ ಯೋಜನೆಯನ್ನು ಅನುಮೋದಿಸಿತು. ಇದರಲ್ಲಿ ಒಟ್ಟು 22 ವಿವಿಧ ಕಾಮಗಾರಿಗಳನ್ನು ಹಂತ ಹಂತವಾಗಿ ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ. ಮೂಲಸೌಕರ್ಯಗಳ ವರ್ಧನೆ ಮತ್ತು ವಾಸ್ತುಶಿಲ್ಪ ನಿರ್ಮಾಣ ಅಭಿವೃದ್ಧಿ ಯೋಜನೆಗಾಗಿ ರಾಜ್ಯ ಸರ್ಕಾರವು ಆರಂಭಿಕ ಹಂತವಾಗಿ ಒದಗಿಸಿರುವ 800 ಕೋಟಿ ರೂ.ಗಳ ನಿಧಿಯ ಜತೆಗೆ ಮೊದಲ ಹಂತದಲ್ಲಿ ಇನ್ನೂ 265 ಕೋಟಿ ರೂ.ಗಳನ್ನು ನೀಡಲಾಗುತ್ತಿದೆ. ಈ ಯೋಜನೆಯು ಶ್ರೀ ಜಗನ್ನಾಥ ದೇವಾಲಯದ ಆಡಳಿತ (ಎಸ್​ಜೆಟಿಎ) ಕಟ್ಟಡದ ಅಭಿವೃದ್ಧಿಯನ್ನು ಒಳಗೊಂಡಿದೆ. 600 ಆಸನ ಸಾಮರ್ಥ್ಯದ ಸ್ವಾಗತ ಕೇಂದ್ರ, ಜಗನ್ನಾಥ ಸಾಂಸ್ಕೃತಿಕ ಕೇಂದ್ರ, ಮಂದಿರದಲ್ಲಿ ಸೌಕರ್ಯಗಳ ಸುಧಾರಣೆ, ಯಾತ್ರಾ ಕೇಂದ್ರ ನಿರ್ವಣ, ಬಹುಮಹಡಿ ಕಾರ್ ರ್ಪಾಂಗ್ ಸೌಲಭ್ಯ, ಮುನ್ಸಿಪಲ್ ಮಾರುಕಟ್ಟೆ, ಗುರುಕುಲಂ, ಕಡಲ ತೀರ ಮುಂಭಾಗ ಅಭಿವೃದ್ಧಿ, ಪುರಿ ಸರೋವರ, ಮೂಸಾ ನದಿ ಪುನರುಜ್ಜೀವನ ಯೋಜನೆ ಮುಂತಾದವು ಈ ಯೋಜನೆಯಲ್ಲಿ ಸೇರಿವೆ.

ಕೋರ್ಟ್ ಮೆಟ್ಟಿಲೇರಿದ ಯೋಜನೆ

ಪುರಿ ಕಾರಿಡಾರ್ ಯೋಜನೆ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದರ ವಿಚಾರಣೆ ಸಂದರ್ಭದಲ್ಲಿ ಒರಿಸ್ಸಾ ರಾಜ್ಯದ ಉಚ್ಚ ನ್ಯಾಯಾಲಯವು, ಪುರಿ ದೇವಾಲಯ ಕಟ್ಟಡದ ಸುರಕ್ಷತೆಯ ಮೇಲೆ ಈ ಕಾಮಗಾರಿಯಿಂದ ಉಂಟಾಗುವ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ನ್ಯಾಯಾಲಯದ ಆದೇಶದ ಅನುಸಾರ ಮೇ 1 ರಂದು ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಯೋಜನಾ ಸ್ಥಳದ ಜಂಟಿ ಪರಿಶೀಲನೆ ಕೈಗೊಂಡ ನಂತರ ಎಎಸ್​ಐ ಪ್ರಮಾಣಪತ್ರ ಸಲ್ಲಿಸಿದ್ದು, ‘ಸೂಕ್ತ ಅನುಮತಿಯಿಲ್ಲದೆ ಸ್ಮಾರಕದ ನಿಷೇಧಿತ ಪ್ರದೇಶಗಳಲ್ಲಿ ರಾಜ್ಯ ಸರ್ಕಾರವು ಯೋಜನೆಯ ನಿರ್ಮಾಣ ಕಾರ್ಯ ಕೈಗೊಳ್ಳುತ್ತಿದೆ’ ಎಂದು ಹೇಳಿದೆ. ರಾಜ್ಯ ಸರ್ಕಾರವು, ‘ಕೇಂದ್ರದ ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರವು (ಎನ್​ಎಂಎ) ಈ ಯೋಜನೆಗೆ ಕಳೆದ ಸೆಪ್ಟೆಂಬರ್​ನಲ್ಲಿ ಎನ್​ಒಸಿ ನೀಡಿದೆ’ ಎಂದು ವಾದಿಸಿದೆ. ನ್ಯಾಯಾಲಯವು ವಿಚಾರಣೆಯನ್ನು ಜೂನ್ 22ಕ್ಕೆ ಮುಂದೂಡಿದೆ. ಇದೇ ವೇಳೆ, ಈ ಯೋಜನೆಯಲ್ಲಿ ಮಂದಿರದ ಬಳಿ ಕೈಗೊಂಡಿದ್ದ ಕಾಮಗಾರಿಗಳನ್ನು ವಿರೋಧಿಸಿದ್ದ ಕೆಲ ಸಂಘಟನೆಗಳ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕಳೆದ ಶುಕ್ರವಾರ ವಜಾ ಮಾಡಿದೆ.

ಪರಿಷ್ಕೃತ ಪ್ರಸ್ತಾವನೆಗೆ ಸೂಚನೆ

ಯೋಜನೆಯ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಲು 2022ರ ಫೆಬ್ರವರಿ 21ರಂದು ಎಎಸ್​ಐ ಮಹಾನಿರ್ದೇಶಕರು ಪುರಿಗೆ ಭೇಟಿ ನೀಡಿದ್ದರು. ಮಾರ್ಚ್ 5ರಂದು ರಾಜ್ಯ ಸರ್ಕಾರಕ್ಕೆ ಎಎಸ್​ಐ ಪತ್ರ ಬರೆದಿದ್ದು, ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದೆ. ‘ಪ್ರಸ್ತಾವಿತ ಸ್ವಾಗತ ಕೇಂದ್ರವು ದೇವಾಲಯದಿಂದ ನಿಷೇಧಿತ 75 ಮೀಟರ್ ವ್ಯಾಪ್ತಿಯ ಒಳಗಡೆ ಇದ್ದು, ಈ ಕಟ್ಟಡವನ್ನು ನಿರ್ಬಂಧಿತ 100 ಮೀಟರ್​ನಿಂದ ಆಚೆ ಸ್ಥಳಾಂತರಿಸುವ ಬಗೆಗೆ ಪರಿಗಣಿಸಬೇಕು. ಮಂದಿರದ ಭದ್ರತೆಯ ಹಿತದೃಷ್ಟಿಯಿಂದ ಕೂಡ ಇದು ಒಳ್ಳೆಯದು’ ಎಂದು ಈ ಪತ್ರದಲ್ಲಿ ಹೇಳಲಾಗಿದೆ. ಪುರಿಯ ವಕೀಲರ ಸಂಘ, ಸ್ಥಳೀಯರು, ನಾಗರಿಕ ಸಂಸ್ಥೆಗಳು ಮತ್ತು ಬಿಜೆಪಿ ಕೂಡ 12ನೇ ಶತಮಾನದ ಈ ಸ್ಮಾರಕದ ಸ್ಥಿರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಏಕೆಂದರೆ, ಸಾರ್ವಜನಿಕ ಸೌಕರ್ಯಗಳನ್ನು ನಿರ್ವಿುಸಲು ಮಂದಿರದಿಂದ 75 ಮೀಟರ್ ವ್ಯಾಪ್ತಿಯೊಳಗಿನ ಪ್ರದೇಶದಲ್ಲಿ ಅಗೆಯಲು ಜೆಸಿಬಿ ಯಂತ್ರಗಳನ್ನು ಬಳಸಲಾಗುತ್ತಿದೆ. ಭುವನೇಶ್ವರದ ಬಿಜೆಪಿ ಸಂಸದ ಅಪರಾಜಿತ ಸಾರಂಗಿ ಸಂಸತ್ತಿನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಯೋಜನೆಯ ಅನುಷ್ಠಾನದಲ್ಲಿ ಅಕ್ರಮ ನಡೆದಿದೆ. ಅಲ್ಲದೆ, ಪುರಾತತ್ವ ಸರ್ವೆಕ್ಷಣಾ ಇಲಾಖೆಯು ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದ್ದರೂ ರಾಜ್ಯ ಸರ್ಕಾರವು ನಿರ್ಮಾಣ ಕಾರ್ಯ ಮುಂದುವರಿಸಿದೆ ಎಂದು ಅವರು ಆರೋಪಿಸಿದ್ದಾರೆ.

ವಿವಾದವೇನು?

12ನೇ ಶತಮಾನದ ಈ ದೇಗುಲವು ಕೇಂದ್ರದ ಸಂರಕ್ಷಿತ ಸ್ಮಾರಕವಾಗಿದ್ದು, ಎಎಸ್​ಐ ಇದರ ಪಾಲಕನಾಗಿದೆ. ಪ್ರಾಚೀನ ಸ್ಮಾರಕಗಳು ಹಾಗೂ ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ (ತಿದ್ದುಪಡಿ ಮತ್ತು ದೃಢೀಕರಣ) ಕಾಯ್ದೆಯ ನಿಯಮಗಳ ಪ್ರಕಾರ, ಇಂತಹ ಸ್ಮಾರಕಗಳ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರದ (ಎನ್​ಎಂಎ) ಅನುಮೋದನೆಯೊಂದಿಗೆ ಮಾತ್ರ ನಿರ್ವಣಗಳನ್ನು ಕೈಗೊಳ್ಳಬಹುದು. ಕೇಂದ್ರೀಯ ಸಂರಕ್ಷಿತ ಸ್ಮಾರಕಗಳ ಸುತ್ತಲಿನ ನಿಷೇಧಿತ ಮತ್ತು ನಿಯಂತ್ರಿತ ಪ್ರದೇಶದ ನಿರ್ವಹಣೆಯ ಮೂಲಕ ಸ್ಮಾರಕಗಳನ್ನು ಸಂರಕ್ಷಿಸುವುದಕ್ಕಾಗಿ ಕಾಯ್ದೆಬದ್ಧವಾಗಿಯೇ ಕೇಂದ್ರ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಈ ಎನ್​ಎಂಎ ಸ್ಥಾಪಿಸಲಾಗಿದೆ. 5,000 ಚದರ ಮೀಟರ್​ಗಿಂತಲೂ ಹೆಚ್ಚಿನ ನಿರ್ಮಾಣ ಪ್ರದೇಶವನ್ನು ಹೊಂದಿರುವ ಪುರಾತತ್ವ ಮಹತ್ವದ ಯಾವುದೇ ಸ್ಮಾರಕದ ಸುತ್ತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಪರಂಪರೆಯ ಮೇಲಾಗುವ ಪರಿಣಾಮಗಳ ಕುರಿತ ಮೌಲ್ಯಮಾಪನ ಅಧ್ಯಯನ ಅತ್ಯಗತ್ಯ ಎಂದು ಎನ್​ಎಂಎ ಮಾರ್ಗಸೂಚಿಗಳು ಹೇಳುತ್ತವೆ. ಜಗನ್ನಾಥ ದೇವಾಲಯವು 43,301 ಚ.ಮೀ. ವಿಸ್ತಾರವಾಗಿರುವುದರಿಂದ ಈ ಮಾರ್ಗಸೂಚಿಗಳು ಇದಕ್ಕೂ ಅನ್ವಯಿಸುತ್ತವೆ.

ಪುರಿ ಪಾರಂಪರಿಕ ಯೋಜನೆಯಲ್ಲಿ ನಿಷೇಧಿತ 75 ಮೀಟರ್ ವ್ಯಾಪ್ತಿ ಪ್ರದೇಶದೊಳಗೆ ಮೂರು ಶೌಚಗೃಹ, ಒಂದು ವಿದ್ಯುತ್ ಕೋಣೆ, ಬಟ್ಟೆ ಕೊಠಡಿ, ತಂಗುದಾಣ ಮತ್ತು ಪಾದಚಾರಿ ಮಾರ್ಗ ನಿರ್ವಣಕ್ಕಾಗಿ 2021ರ ಸೆಪ್ಟೆಂಬರ್ 4 ರಂದು ರಾಜ್ಯ ಸರ್ಕಾರಕ್ಕೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್​ಒಸಿ) ಎನ್​ಎಂಎ ನೀಡಿದೆ. ಕಾಯ್ದೆ ಅನುಸಾರವಾಗಿ, ಸಾರ್ವಜನಿಕ ಸೌಕರ್ಯಗಳು ಯಾವುದೇ ನಿರ್ವಣದ ವ್ಯಾಖ್ಯಾನದ ಅಡಿಯಲ್ಲಿ ಬರುವುದಿಲ್ಲ ಎಂಬ ಅಂಶವನ್ನು ಆಧರಿಸಿ ಎನ್​ಎಂಎ ಈ ಎನ್​ಒಸಿ ನೀಡಿದೆ. ಅಲ್ಲದೆ, ಎಎಸ್​ಐ ಮೇಲುಸ್ತುವಾರಿಯಲ್ಲಿ ಕಾಮಗಾರಿ ಕೈಗೊಂಡರೆ ಅಭ್ಯಂತರ ಇಲ್ಲವೆಂದೂ ಹೇಳಿದೆ. ಆದರೆ, ಎಎಸ್​ಐ ಇಂತಹ ಯಾವುದೇ ಎನ್​ಒಸಿ ನೀಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net