

ಕಡೂರು: ವಾರ್ಡ್‌ಗಳಲ್ಲಿನ ಸ್ಥಳೀಯ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ದೊರಕಿಸಿಕೊಡುವ ಉದ್ದೇಶದಿಂದ ಪುರಸಭೆಯಿಂದ ‘ನಮ್ಮ ನಡೆ ಸಾರ್ವಜನಿಕರ ಕಡೆ’ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.
ಪುರಸಭೆ ಸಭಾಂಗಣದಲ್ಲಿ ಸೋಮವಾರ ವಾರ್ಡ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ವ್ಯಾಪ್ತಿ ವಿಸ್ತಾರಗೊಳ್ಳುತ್ತಿದ್ದು ಅಭಿವೃದ್ಧಿಯ ಜತೆಗೆ ನಾಗರಿಕರ ಸಮಸ್ಯೆಗಳನ್ನು ಆಲಿಸುವುದು ಜನಪ್ರತಿನಿಧಿಯ ಕರ್ತವ್ಯ. ಇದಕ್ಕೆ ಪುರಸಭೆಯಿಂದಲೇ ಪಟ್ಟಣದ 23 ವಾರ್ಡ್‌ಗಳಲ್ಲಿನ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಪುರಸಭೆ ಆಡಳಿತವನ್ನು ಜನರ ಬಳಿಗೆ ತಲುಪಿಸುವ ನಿಟ್ಟಿನಲ್ಲಿ ಮತ್ತಷ್ಟು ಜನಸ್ನೇಹಿ ಆಡಳಿತವಾಗಿ ರೂಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ವಾರ್ಡ್ ಸಭೆಗೆ ಒಪ್ಪಿಗೆ ನೀಡಿದ್ದು ನಿಗದಿತ ವಾರ್ಡ್‌ಗಳಲ್ಲಿ ಸಭೆ ನಡೆಸುವ ಆಲೋಚನೆ ಇದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ದಿನಾಂಕ ಮತ್ತು ಸ್ಥಳ ನಿಗದಿಪಡಿಸಿ ಸಾರ್ವಜನಿಕರಿಗೆ ವಾರ ಮೊದಲೇ ಮಾಹಿತಿ ನೀಡಲಾಗುತ್ತದೆ. ವಾರ್ಡ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಭೆಯಲ್ಲಿ ನೇರವಾಗಿ ಸಾರ್ವಜನಿಕರು ತಿಳಿಸಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಗಂಭೀರ ಸ್ವರೂಪದ ಸಮಸ್ಯೆಗಳಿಗೆ ಕ್ಷೇತ್ರದ ಶಾಸಕರ ಸಹಕಾರ ಪಡೆಯಲಾಗುತ್ತದೆ ಎಂದರು.
ಪುರಸಭೆ ಸದಸ್ಯ ಸೈಯದ್ ಯಾಸೀನ್ ಮಾತನಾಡಿ, ಪಟ್ಟಣದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳನ್ನು ಆಲಿಸಲು ಪುರಸಭೆ ಕೈಗೊಂಡಿರುವ ಕಾರ್ಯಕ್ರಮ ಸಾರ್ವಜನಿಕರಿಗೆ ಸದುಪಯೋಗವಾಗಲಿದೆ. ಉತ್ತಮ ಆಡಳಿತ ನೀಡಲು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಕೈಗೊಂಡಿರುವ ವಿಶೇಷ ಕಾರ್ಯಕ್ರಮ ಶ್ಲಾಘನೀಯ. ವಾರ್ಡ್‌ಗಳಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಮುಖ್ಯ ಎಂದರು.
ಸದಸ್ಯ ಮರುಗುದ್ದಿ ಮನು ಮಾತನಾಡಿ, ಪಟ್ಟಣದ ಕಸ ವಿಲೇವಾರಿಗೆ ಪುರಸಭೆ ವಾಹನಗಳ ಸಿಬ್ಬಂದಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದರೆ ಖಾಸಗಿ ಸಂಸ್ಥೆಗಳ (ಎನ್‌ಜಿಒ) ನೀಡಿರುವ ಟೆಂಡರ್‌ದಾರರ ಬಗ್ಗೆ ಕೆಲವು ಭಾಗಗಳಲ್ಲಿ ಅಸಮಾಧಾನವಿದೆ. ಇದಕ್ಕೆ ಅಧ್ಯಕ್ಷರು ಅಗತ್ಯ ಕ್ರಮ ವಹಿಸುವಂತೆ ಆಗ್ರಹಿಸಿದರು.
ಸದಸ್ಯೆ ಸುಧಾ ಉಮೇಶ್ ಮಾತನಾಡಿ, ವಾರ್ಡ್ ಸಭೆಗಳು ಪ್ರತಿಯೊಂದು ವಾರ್ಡ್‌ನಲ್ಲಿ ನಡೆಸಿದರೆ ಇಲ್ಲಿನ ಸಮಸ್ಯೆಗಳಿಗೆ ಶೀಘ್ರ ಪರಿಹರಿಸಬಹುದು. ಅನಗತ್ಯವಾಗಿ ಅಲೆದಾಟ ತಪ್ಪಿಸಿ, ಹಂತ ಹಂತವಾಗಿ ಅಧಿಕಾರಿಗಳು ಜನರ ಕೆಲಸ ಕಾರ್ಯ ಮಾಡಿಕೊಡಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯರಾದ ವಿಜಯ ಚಿನ್ನರಾಜ್, ಪುಷ್ಪಾಲತಾ ಮಂಜುನಾಥ್, ಜ್ಯೋತಿ ಆನಂದ್, ಸುಬ್ಬಣ್ಣ, ಶ್ರೀಕಾಂತ್, ಮೋಹನ್, ಯತಿರಾಜ್, ಮುಖ್ಯಾಧಿಕಾರಿ ಮಂಜುನಾಥ್ ಮುಂತಾದವರಿದ್ದರು.