ಪುರಸಭೆ ಜಾಗ ಒದಗಿಸಿದರೆ ಫುಡ್‌ಕೋರ್ಟ್ ನಿರ್ಮಾಣ

24kdr1 anand
ಕಡೂರಲ್ಲ ಸಂಗೊಳ್ಳಿರಾಯಣ್ಣ ಟ್ಯಾಕ್ಸಿ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಆನಂದ್ ಅವರನ್ನು ಅಭಿನಂದಿಸಿಸಲಾಯಿತು. ಭಂಡಾರಿ ಶ್ರೀನಿವಾಸ್, ಶರತ್ ಕೃಷ್ಣಮೂರ್ತಿ, ಮೋಹನ್‌ಕುಮಾರ್, ವಿನೋದ್, ಗೋಪಿ, ಮಂಜಣ್ಣ ಮತ್ತಿತರರಿದ್ದರು.
Published on

ಕಡೂರು: ಅಭಿವೃದ್ಧಿ ಜತೆಗೆ ದುಡಿಯುವ ವರ್ಗಗಳನ್ನು ಗುರುತಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಶ್ರಮಿಸಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಡಿಯಲ್ಲಿ ಸೋಮವಾರ ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಂಡ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಟ್ಯಾಕ್ಸಿ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದರು.

ಚಾಲಕ ವೃತ್ತಿಯು ಜೀವದ ಹಂಗು ತೊರೆದು ಪ್ರಾಮಾಣಿಕತೆಯಿಂದ ನಿರ್ವಹಿಸುವ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಸಂಘದ ಬೇಡಿಕೆಯ ಅನುಗುಣವಾಗಿ ಸುಸಜ್ಜಿತ ನಿಲ್ದಾಣ ನಿರ್ಮಿಸಿಕೊಡಲಾಗಿದೆ ಎಂದರು.

ಪುರಸಭೆ ಅಗತ್ಯ ಜಾಗ ಒದಗಿಸಿದರೆ ಪುಡ್‌ಕೋರ್ಟ್ ನಿರ್ಮಿಸಲಾಗುವುದು. ಬೀರೂರು ಪಟ್ಟಣದಲ್ಲಿಯೂ ಹೂವಿನ ಸ್ಟಾಲ್ ನಿರ್ಮಿಸಲಾಗುವುದು. ಸರ್ಕಾರ ಅಭಿವೃದ್ಧಿಗೆ ನೀಡುವ 2 ಕೋಟಿ ಶಾಸಕರ ಅನುದಾನದಲ್ಲಿ ಚೆಕ್‌ಡ್ಯಾಂ ಇತರ ಕಾರ್ಯಗಳಿಗೆ ವಿನಿಯೋಗಿಸುವ ಕಾರ್ಯವಾಗುತ್ತದೆ. ಉದ್ಘಾಟನಾ ಶಿಲಾನ್ಯಾಸದ ಕಲ್ಲಿನಲ್ಲಿ ಶಿಷ್ಟಾಚಾರ ಪಾಲನೆಯಾಗಿಲ್ಲ ಎಂದು ಪುರಸಭೆ ಅಧ್ಯಕ್ಷರ ಅಸಮಾಧಾನದ ಹಿನ್ನೆಲೆಯಲ್ಲಿ ಶಿಲಾನ್ಯಾಸದ ಕಲ್ಲಿನಲ್ಲಿ ಆಗಿರುವ ಲೋಪ ಸರಿಪಡಿಸುವಂತೆ ಇಲಾಖೆ ಇಂಜಿನಿಯರ್‌ಗೆ ಸೂಚಿಸಿದರು.

ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಈ ಹಿಂದೆ ಟ್ಯಾಕ್ಸಿ ನಿಲ್ದಾಣವನ್ನು ಇಲ್ಲಿಂದ ತೆರವು ಮಾಡಲು ಒತ್ತಡಗಳು ಬಂದರೂ ಟ್ಯಾಕ್ಸಿ ಚಾಲಕರ ಪರವಾಗಿ ನಿಂತಿದ್ದೇನೆ. ಪುರಸಭೆ ಇತಿಮಿತಿಯಲ್ಲಿ ನಿಲ್ದಾಣಕ್ಕೆ ಅಗತ್ಯ ಸೌಲಭ್ಯ ಒದಗಿಸಲಾಗುವುದು. ಪ್ರಸ್ತಾವನೆ ಸಲ್ಲಿಸಿರುವ ಬೇಡಿಕೆಗೆ ಶಾಸಕರು ಅನುದಾನ ಬಿಡುಗಡೆಗೊಳಿಸಿದರೆ ಅಭಿವೃದ್ಧಿ ನಡೆಸಲಾಗುವುದು ಎಂದರು.

ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯರಾದ ತೋಟದಮನೆ ಮೋಹನ್‌ಕುಮಾರ್, ಮರುಗುದ್ದಿ ಮನು, ಸೈಯಾದ್ ಯಾಸೀನ್, ಸುಧಾ ಉಮೇಶ್, ಜ್ಯೋತಿ ಆನಂದ್, ಶ್ರೀಕಾಂತ್, ಮುಖಂಡರಾದ ರಾಜು, ಪಂಗ್ಲಿ ಮಂಜು, ಟ್ಯಾಕ್ಸಿ ನಿಲ್ದಾಣ ಸಂಘದ ಅಧ್ಯಕ್ಷ ಹರುವನಹಳ್ಳಿ ವಿನೋದ್, ಗೌರವಾಧ್ಯಕ್ಷ ಗೋಪಿ, ಉಪಾಧ್ಯಕ್ಷ ಶ್ರೀನಿವಾಸ್, ಪದಾಧಿಕಾರಿಗಳಾದ ಮಂಜಣ್ಣ, ಆಸ್ೀ ಪಾಷಾ, ರಾಜೇಶ್, ಕಡೂರಹಳ್ಳಿ ಜಗದೀಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net