ಪಾಳು ಬಂಗಲೆಯಂತಾಗಿರುವ ಎಚ್.ಡಿ.ಕೋಟೆ ಆಡಳಿತಸೌಧ

1HDK02
ಎಚ್.ಡಿ.ಕೋಟೆಯ ಆಡಳಿತ ಸೌಧದ ವರಾಂಡದಲ್ಲಿ ಅಶುಚಿತ್ವ ತಾಂಡವವವಾಡುತ್ತಿರುವುದು.
Published on

ಎಚ್.ಡಿ.ಕೋಟೆ: ಎಂಟು ವರ್ಷಗಳ ಹಿಂದೆ ಪಟ್ಟಣದ ಹೃದಯ ಭಾಗದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮೂರು ಅಂತಸ್ತಿನ ತಾಲೂಕು ಆಡಳಿತಸೌಧ ನಿರ್ವಹಣೆ ಇಲ್ಲದೆ ಪಾಳು ಬಂಗಲೆಯಂತಾಗಿದೆ.

ನೆಲ ಮಹಡಿಯಲ್ಲಿ ಕಂದಾಯ ಇಲಾಖೆಯ ರೆಕಾರ್ಡ್ ರೂಂ, ಚುನಾವಣಾ ಶಾಖೆ, ಆರ್‌ಟಿಸಿ ವಿತರಣಾ ಕೇಂದ್ರ, ಮೊದಲನೇ ಮಹಡಿಯಲ್ಲಿ ತಹಸೀಲ್ದಾರ್ ಕಚೇರಿ, ಉಪಖಜಾನೆ, ಕಂದಾಯ ಇಲಾಖೆ ಆಡಳಿತ ಕೊಠಡಿ ಇದೆ. ಎರಡನೇ ಮಹಡಿಯಲ್ಲಿ ಆಹಾರ , ಸರ್ವೇ ಇಲಾಖೆ ಹಾಗೂ ಶಾಸಕರ ಕಚೇರಿ ಇದೆ. ಮೂರನೇ ಮಹಡಿಯಲ್ಲಿ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ರೇಷ್ಮೆ ಇಲಾಖೆ, ಕುಡಿಯುವ ನೀರು ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರ ಕಚೇರಿ ಇದೆ.

ನೆಲ ಮಹಡಿಯನ್ನು ಸ್ವಚ್ಛಗೊಳಿಸಿ ದಿನಗಳೇ ಕಳೆದಿದ್ದು, ಹೇಳುವವರು ಕೇಳುವವರು ಯಾರು ಇಲ್ಲ ಎಂಬಂತಾಗಿದೆ. ಇನ್ನು ಮೊದಲನೆಯ ಮಹಡಿಯನ್ನು ನಿತ್ಯ ಪೌರಕಾರ್ಮಿಕರು ಬಂದು ಸ್ವಚ್ಛ ಮಾಡುತ್ತರಾದರೂ ಸ್ವಚ್ಛವಾಗಿಲ್ಲ. ಎರಡು ಮತ್ತು ಮೂರನೇ ಮಹಡಿಯಲ್ಲಿ ಎಲ್ಲೆಂದರಲ್ಲಿ ಕಸದ ರಾಸಿ ಬಿದ್ದಿರುತ್ತದೆ. ವಾರ ಕಳೆದರೂ ಅದನ್ನು ತೆರವು ಮಾಡುವ ಕೆಲಸ ಆಗುವುದಿಲ್ಲ. ಒಂದು ಇಲಾಖೆ ಮಾಡಲಿ ಎಂದು ಇನ್ನೊಂದು ಇಲಾಖೆ…ಹೀಗೆ ಎಲ್ಲರೂ ಸಂಬಂಧವಿಲ್ಲದಂತೆ ಇರುವುದರಿಂದ ಕಟ್ಟಡದ ಅಂದ ಹಾಳುಗುತ್ತಿದೆ.

ಶಾಸಕರ ಕಚೇರಿ ಪಕ್ಕದಲ್ಲೇ ರಾಶಿ ರಾಶಿಯಾಗಿ ಕಸದ ಗುಡ್ಡೆಯೇ ಇದೆ. ಮೂರೂ ಅಂತಸ್ತಿನಲ್ಲಿ ನೌಕರರಿಗೆ ಶೌಚಗೃಹವಿದ್ದು ನಿರ್ವಹಣೆ ಇಲ್ಲದೆ ಗಬ್ಬುನಾರುತ್ತಿವೆ. ಸರಿಯಾದ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಸಮಸ್ಯೆ ಹೆಚ್ಚಾಗಿದೆ. ಇದರಿಂದಾಗಿ ಸಾರ್ವಜನಿಕರು ಮೂಗು ಮುಚ್ಚಿ ತಿರುಗಾಡುವ ಪರಿಸ್ಥಿತಿ ಇದೆ. ಈ ನಡುವೆ ಸಾರ್ವಜನಿಕರಿಗೆ ಪ್ರತ್ಯೇಕ ಶೌಚಗೃಹ ಇಲ್ಲದಿರುವುದರಿಂದ ನೌಕರರ ಶೌಚಗೃಹವನ್ನೇ ಸಾರ್ವಜನಿಕರು ಬಳಕೆ ಮಾಡುತ್ತಿರುವುದೂ ಅನೈರ್ಮಲ್ಯಕ್ಕೆ ಮತ್ತೊಂದು ಕಾರಣ.

ತಾಲೂಕು ಆಡಳಿತಸೌಧದಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂಬ ಆದೇಶವಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಎರಡನೇ ಅಂತಸ್ತಿನ ಹೊರಾಂಡದಲ್ಲಿ ಪಾರಿವಾಳ ಹಾಗೂ ಇತರ ಪಕ್ಷಿಗಳು ಹಿಕ್ಕೆ ಹಾಕಿದ್ದು ಗಲೀಜು ಹೆಚ್ಚಾಗಿದೆ. ಆದರೆ ಸ್ವಚ್ಛ ಮಾಡುವ ಕೆಲಸ ಮಾತ್ರ ಈವರೆಗೂ ಆಗಿಲ್ಲ.

ಮೂರು ಅಂತಸ್ತಿನ ಕಟ್ಟಡಕ್ಕೆ ಲಿಫ್ಟ್ ವ್ಯವಸ್ಥೆ ಇಲ್ಲದಿರುವುದರಿಂದ ವಯಸ್ಸಾದವರು ಮಹಡಿ ಹತ್ತಲು ತೊಂದರೆಪಡುತ್ತಿದ್ದಾರೆ. ಈ ಬಗ್ಗೆ ಹಲವಾರು ಸಭೆಗಳಲ್ಲಿ ರೈತರು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಇನ್ನು ಕಟ್ಟಡದ ಸುತ್ತ ಗಿಡಗಂಟಿ ಬೆಳೆದು ಕುರುಚಲು ಕಾಡಿನಂತಾಗಿದ್ದು ಸೊಳ್ಳೆಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ. ಕಟ್ಟಡದ ಛಾವಣಿಯಲ್ಲಿ ಹೆಜ್ಜೇನು ಗೂಡು ಕಟ್ಟಿದ್ದು ಹಲವಾರು ಬಾರಿ ಸಾರ್ವಜನಿಕರ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಂಡಿರುವ ಉದಾಹರಣೆ ಉಂಟು.

ನೀರು ಸರಾಗವಾಗಿ ಹರಿಯಲು ಜಾಗ ಇಲ್ಲದ ಕಾರಣ ಮಳೆಗಾಲದಲ್ಲಿ ಕಟ್ಟಡದ ವರಾಂಡದಲ್ಲಿ ನೀರು ನಿಂತು ಕೆರೆಯಂತಾಗುತ್ತದೆ. ಎರಡನೇ ಬಾರಿಗೆ ಶಾಸಕರಾಗಿರುವ ಶಾಸಕ ಅನಿಲ್ ಚಿಕ್ಕಮಾದು ಅವರ ಮೇಲೆ ತಾಲೂಕಿನ ಜನರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಹೆಚ್ಚು ಅನುದಾನ ತಂದು ಅಭಿವೃದ್ಧಿಗೆ ವೇಗ ನೀಡಲಿದ್ದಾರೆ ಎಂಬುದು ಸ್ಥಳೀಯರ ಆಶಯ.

ತಾಲೂಕು ಆಡಳಿತಸೌಧದಲ್ಲಿನ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದಾಗಲಿ ಅಥವಾ ಅಧಿಕಾರಿಗಳಿಂದಾಗಲಿ ಈವರೆಗೂ ಯಾವುದೇ ದೂರು ಬಂದಿಲ್ಲ. ಈಗಷ್ಟೆ ಸಮಸ್ಯೆ ಗಮನಕ್ಕೆ ತಂದಿದ್ದು, ಪರಿಶೀಲಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು.
ರುಚಿ ಬಿಂದಾಲ್ ಉಪವಿಭಾಗಾಧಿಕಾರಿ, ಹುಣಸೂರು

ತಾಲೂಕು ಆಡಳಿತಸೌಧದಲ್ಲಿ ಮೂಲಸೌಕರ್ಯವಿಲ್ಲ. ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಹಾಗಾಗಿ ಸಮರ್ಥ ತಹಸೀಲ್ದಾರ್ ನೇಮಿಸುವ ಮೂಲಕ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಅನುವು ಮಾಡಿಕೊಡಬೇಕು.
ಸಣ್ಣಕುಮಾರ್ ತಾಲೂಕು ಸಂಚಾಲಕ, ದಸಂಸ ಅಂಬೇಡ್ಕರ್ ವಾದ

ಸರಿಯಾದ ಸಮಯಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಬಾರದಿರುವುದರಿಂದ ಸಾರ್ವಜನಿಕರ ಕೆಲಸಗಳು ವಿಳಂಬ ಆಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಹರಿಸಿ ತಡವಾಗಿ ಬರುವ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕು. ಅಂತಹ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮ ವಹಿಸಬೇಕು.
ಮಟಕೆರೆ ಕೃಷ್ಣ ಸ್ಥಳೀಯರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net