ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ: ಕಾಂಗ್ರೆಸ್ ಸದಸ್ಯರ ಪ್ರತಿಭಟನೆ

6
Published on

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿರುವ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.

ಮೇಯರ್ ಕೊಠಡಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಸದಸ್ಯರು, ಮಹಾಪೌರರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೇಯರ್ ಖುರ್ಚಿಗೆ ಕತ್ತೆ ಫೋಟೋ ಅಂಟಿಸಿ ಅಣಕಿಸಿದರು.

ಪಾಲಿಕೆಯ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗೆ ಗುರುವಾರ ನಿಗದಿಯಾಗಿದ್ದ ಚುನಾವಣೆಯನ್ನು ಮತ್ತೆ ಮುಂದೂಡುವ ಮೂಲಕ ಮೇಯರ್ ಶಿವಕುಮಾರ್ ಪಲಾಯನವಾದ ಪ್ರದರ್ಶಿಸಿದ್ದು, ಇಂಥ ಓಡಿಹೋಗುವ ಮೇಯರ್ ಅವರನ್ನು ಎಂದೂ ನೋಡಿಲ್ಲ ಎಂದು ಪಾಲಿಕೆಯ ಪ್ರತಿಪಕ್ಷದ ನಾಯಕ ಅಯೂಬ್ ಖಾನ್ ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು.

ಈ ಹಿಂದೆ ಕಚೇರಿಯ ಬಾಗಿಲಿಗೆ ಬೀಗ ಹಾಕುವ ಮೂಲಕ ಪ್ರತಿಭಟನೆ ನಡೆಸಿದ್ದೆವು. ನಂತರ ಅನಾರೋಗ್ಯದ ಕಾರಣ ಹೇಳಿದ್ದರು. ಇದೀಗ ವಿಧಾನಸಭೆ ಚುನಾವಣೆ ಸಿದ್ಧತೆಯ ನೆಪ ಮುಂದಿಟ್ಟಿದ್ದಾರೆ. ಕೂಡಲೇ ಮೇಯರ್ ಶಿವಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.


ಬಿಜೆಪಿ ಆಡಳಿತವು ಸಾರ್ವಜನಿಕರ ವಿರೋಧಿಯಾಗಿದೆ. 22ರಂದು ಯುಗಾದಿ ರಜೆ ಇದ್ದರೂ ಸಭೆ ರದ್ದಾಗಿದೆ ಎಂದು ರಾತ್ರಿ 9.30ಕ್ಕೆ ಗೊತ್ತುವಳಿ ಪತ್ರ ಬರುತ್ತದೆ. ಪಾಲಿಕೆ ಆಯುಕ್ತ, ಕೌನ್ಸಿಲ್ ಕಾರ್ಯದರ್ಶಿ ಕೂಡ ನಾಪತ್ತೆಯಾಗಿದ್ದಾರೆ. ಪಾಲಿಕೆಯು ಆಡಳಿತ ನನೆಗುದಿಗೆ ಬಿದ್ದಿದೆ ಎಂದು ದೂರಿದರು.

ಆಯುಕ್ತರೂ ಮೇಯರ್ ಪರವಾಗಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ವಿಧಾನಸೌಧದಲ್ಲಿ ಸುಮ್ಮನೆ ಕುಳಿತಿದ್ದಾರೆ. ಈಗಾಗಲೇ ಕಾರ್ಯದರ್ಶಿ, ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಧಿಕಾರಿ ವರ್ಗ ಬಿಜೆಪಿಯ ಕೈಗೊಂಬೆಯಾಗಿದೆ ಎಂದು ಆರೋಪಿಸಿದರು.


2022ರ ಸೆ.6ರಂದ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಯಾಗಿದೆ. ಆದರೆ, 4 ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲು ಮಾತ್ರ ಆಡಳಿತ ಪಕ್ಷಕ್ಕೆ ಆಸಕ್ತಿ ತೋರುತ್ತಿಲ್ಲ ಎಂದು ದೂರಿದರು.

ಒಂದಾದರೂ ಮಾಸಿಕ ಸಭೆ ನಡೆಸಬೇಕು. ಆದರೆ, ಮೇಯರ್ ಶಿವಕುಮಾರ್ 8 ತಿಂಗಳಲ್ಲಿ 2 ಸಭೆಯನ್ನು ಆಯೋಜಿಸಿದ್ದಾರೆ. ಅವುಗಳೂ ಅರ್ಧಕ್ಕೆ ಮೊಟಕುಗೊಂಡಿವೆ. ಅವ್ಯವಹಾರ ನಡೆಸಿದ್ದರಿಂದಲೇ ಸ್ಥಾಯಿ ಸಮಿತಿ ಚುನಾವಣೆ ನಡೆಸುತ್ತಿಲ್ಲ. ಅದರಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಮಾರ್ಚ್ ಒಳಗೆ ಬಜೆಟ್ ಮಂಡಿಸದಿದ್ದರೆ ಕೋಟ್ಯಂತರ ರೂ.ಯೋಜನೆಗಳ ಅಭಿವೃದ್ಧಿ ಕೆಲಸಗಳು ನನೆಗುದಿಗೆ ಬೀಳಲಿವೆ. ವಿಧಾನಸಭೆ ಚುನಾವಣೆ ಘೋಷಣೆಯೂ ಹತ್ತಿರ ಇದೆ. ಬಜೆಟ್‌ಗೆ ಮೂರು ತಿಂಗಳ ಹಿಂದೆಯೇ ಸಿದ್ಧತೆ ನಡೆಸಬೇಕು. ಹಣಕಾಸು ಸಮಿತಿ ರಚಿಸದೇ, ಬಜೆಟ್ ಮಂಡಿಸಲಾಗದು ಎಂದು ಎಚ್ಚರಿಸಿದರು.


ಬಿಜೆಪಿಯವರು ಪಾಲಿಕೆಯ ಮಾನ ಮರ್ಯಾದೆ ಕಳೆಯುತ್ತಿದ್ದಾರೆ. ಈ ಹಿಂದಿನ ಮೇಯರ್ ಆಗಿದ್ದ ಸುನಂದಾ ಫಾಲನೇತ್ರ ಅಧಿಕಾರಾವಧಿಯಲ್ಲೂ 3 ಸಭೆ ಮಾತ್ರ ನಡೆಸಿದ್ದರು. ಗ್ಯಾಸ್‌ಪೈಪ್‌ಲೈನ್ ಯೋಜನೆಯ ಅನುಮೋದನೆಗಾಗಿ ಸಭೆ ನಡೆಸಿದ್ದರು. ಶಾಸನಬದ್ಧವಾಗಿ ಆಡಳಿತ ನಡೆಸದೇ ಓಡಿಹೋಗುವುದೇ ಬಿಜೆಪಿಗರ ಕೆಲಸವಾಗಿದೆ ಎಂದು ಕಿಡಿಕಾರಿದರು.


ಪಾಲಿಕೆಯ ಸದಸ್ಯರಾದ ಆರೀಫ್ ಹುಸೇನ್, ಶ್ರೀಧರ್, ಗೋಪಿ, ಶೋಭಾ ಸುನಿಲ್, ರಜಿನಿ ಅಣ್ಣಯ್ಯ, ಲಕ್ಷ್ಮೀ ಕುಮಾರ್, ಶಿವಕುಮಾರ್, ಸತ್ಯರಾಜ್, ಲೋಕೇಶ್ ಪಿಯಾ, ಹಾಜಿರಾ ಸೀಮಾ, ಪಲ್ಲವಿ ಬೇಗಂ ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net